ರಾಣೇಬೆನ್ನೂರು, ಏ. 12- ಸಾವಿರಾರು ಸಂಖ್ಯೆಯಲ್ಲಿ ಗುಳೇ (ವಲಸೆ) ಬಂದಿರುವ ಹೆಳವರು ಮತ್ತು ಕೂಲಿಗಾಗಿ ವಿವಿಧ ಗ್ರಾಮಗಳಲ್ಲಿ ಬಂದು ಬಿಡಾರ ಹೂಡಿರುವ ಕುಟುಂಬಗಳನ್ನು ಪತ್ತೆ ಹಚ್ಚಿ ಅವರವರ ಜಿಲ್ಲೆಗಳಿಗೆ, ಊರುಗಳಿಗೆ ಕಳುಹಿಸಿಕೊಟ್ಟು, ಆಯಾ ಮತಗಟ್ಟೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ್ ಒತ್ತಾಯಿಸಿದರು.
ರಾಣೇಬೆನ್ನೂರು ತಾಲ್ಲೂಕಿನ ಮುಷ್ಟೂರು, ಮಾಗೋಡ ಗ್ರಾಮಗಳಲ್ಲಿ ಹಲವಾರು ದಿನಗಳಿಂದ ಬಿಡಾರ ಹೂಡಿರುವ ನೂರಾರು ಹೆಳವ ಕುಟುಂಬಗಳೊಂದಿಗೆ ನಡೆದ ಮತದಾನ ಜಾಗೃತಿಯ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಚಿತವಾಗಿ ಸರ್ಕಾರಿ ಬಸ್‍ಗಳಲ್ಲಿ ಅಥವಾ ಇತರೇ ವಾಹನಗಳಲ್ಲಿ ಹೆೆಳವರು ಮತ್ತು ಕೂಲಿ ಕಾರ್ಮಿಕರನ್ನು ಕಳುಹಿಸಿಕೊಡುವಂತಹ ಜವಾಬ್ದಾರಿ ಕೆಲಸಗಳನ್ನು ಕೂಡ ಆಯಾ ಜಿಲ್ಲಾ ಆಡಳಿತ ಜಿಲ್ಲಾಡಳಿತ, ಜಿಲ್ಲಾ ಮತ್ತು ತಾಲ್ಲೂಕು ಸ್ಪಿಪ್ ಸಮಿತಿಯವರು ಮಾಡಬೇಕೆಂದು ಆಗ್ರಹಿಸಿದರು.
ಮತದಾರರಿಗೆ ಕೇವಲ ಮತದಾನ ಜಾಗೃತಿ, ಮತ ಯಂತ್ರಗಳ ಮಾಹಿತಿಗಷ್ಟೇ ಸೀಮಿತವಾಗದೇ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಈ ಭಾರತದಲ್ಲಿ ಮತದಾನಕ್ಕಿರುವ ಮಹತ್ವವನ್ನು ಎತ್ತಿ ಹಿಡಿಯಬೇಕೆಂದು ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗಕ್ಕೆ ಆಗ್ರಹಿಸಿದರು.
ಇ.ವಿ.ಎಂ.ವಿ.ವಿ. ಪ್ಲಾಟ್‍ನಂತಹ ಮಿಷನ್‍ಗಳ ಬಗ್ಗೆ ಅರಿವೇ ಇಲ್ಲದ ಹೆಳವರಿಗೆ ಮತದಾನದ ಮಹತ್ವವನ್ನು ತಿಳಿಹೇಳಿ ಅವರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್, ಜಿಲ್ಲಾ ಮತ್ತು ತಾಲ್ಲೂಕು ಸ್ಪೀಪ್ ಸಮಿತಿ ಮತ್ತು ಚುನಾವಣಾ ಆಯೋಗಕ್ಕೆ ಇಂಥ ಗುಳೇ (ವಲಸೆ) ಬಂದಿರುವ ಮತದಾರರ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಯಲ್ಲಾಪುರ, ಹಳಿಯಾಳ ತಾಲೂಕುಗಳಿಂದ ಬಂದಿರುವ ಇಂತಹ ಅನೇಕರು ನಮ್ಮ ಗ್ರಾಮೀಣ ಭಾಗದಲ್ಲಿ ಬಿಡಾರ ಹೂಡಿದ್ದಾರೆ. ಇವರ ಬಗ್ಗೆ ಇದುವರೆಗೂ ಗಮನ ಹರಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಇರುವ ಅಧಿಕಾರಿಗಳ ಬೇಜವಾಬ್ದಾರಿಯನ್ನು ಪಾಟೀಲರು ಈ ಸಂದರ್ಭದಲ್ಲಿ ಖಂಡಿಸಿದರು.