ಹರಿಹರ ಕ್ಷೇತ್ರದ ನೂತನ ಬಿಜೆಪಿ ಕಛೇರಿ ಉದ್ಘಾಟನೆ
ಹರಿಹರ, ಏ.12- ಹಿಂದೆ ನಾನು ಶಾಸಕನಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪಕ್ಷವು ಮತ್ತೆ ನನಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟಿದ್ದು, ಕ್ಷೇತ್ರದಲ್ಲಿ ಗೆಲ್ಲುವುದರ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿ ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು.
ವಿದ್ಯಾನಗರದಲ್ಲಿ ಬಿಜೆಪಿ ನೂತನ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿ, ಆಕಾಂಕ್ಷಿಗಳಾದ ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್ ಮತ್ತು ನಾನು ಮೂರೂ ಜನ ಮಾತನಾಡಿಕೊಂಡಿದ್ದು, ನಾವುಗಳು ಟಿಕೆಟ್ ಕೊಡಿ ಎಂದು ಯಾವುದೇ ನಾಯಕರನ್ನು ಬೆನ್ನು ಹತ್ತಿ ಹೋಗುವುದು ಬೇಡ. ಕಾರಣ ಪಕ್ಷದ ವರಿಷ್ಟರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಹಾಗಾಗಿ ಟಿಕೆಟ್‌ಗಾಗಿ ಪೈಪೋಟಿ ಮಾಡುವುದಕ್ಕಿಂತ ಮೂರು ಜನ ಜನರ ಬಳಿ ಮತಯಾಚನೆ ಮಾಡುವುದು ಸೂಕ್ತ ಎಂಬ ತೀರ್ಮಾನ ತೆಗೆದುಕೊಂಡಿದ್ದೆವು.
ಪಕ್ಷದ ಕಾರ್ಯಕರ್ತರು ಕೂಡ ಹರಿಹರ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ 2008 ರಿಂದ 2013 ರವರೆಗೆ ಬಿಜೆಪಿ ಪಕ್ಷವು ಅಧಿಕಾರ ಮಾಡಿದ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆ, ಸೇತುವೆ, ಸ್ವಿಮ್ಮಿಂಗ್ ಪೂಲ್, ತಹಶೀಲ್ದಾರ್ ಕಚೇರಿ, ಪಾಲಿಟೆಕ್ನಿಕ್ ಕಾಲೇಜು, ಡಿಗ್ರಿ ಕಾಲೇಜು ಇವುಗಳು ಇರಲಿಲ್ಲ. ನಾನು ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಯಿತು.
ನಂತರ ಹತ್ತು ವರ್ಷ ಜೆಡಿಎಸ್, ಕಾಂಗ್ರೆಸ್ ಪಕ್ಷದವರು ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಗಳನ್ನು ಮಾಡದೇ ಇರುವುದರಿಂದ ಅಭಿವೃದ್ಧಿ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎನ್ನುವ ತೀರ್ಮಾ ನವನ್ನು ಜನರು ಮಾಡಿದ್ದಾರೆ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗ ವಾಡಿ ಮಾತನಾಡಿ ಪಕ್ಷದ ಆಜ್ಞೆಯನ್ನು ಮೀರುವಂ ತಹ ಯಾವುದೇ ಕೆಲಸವನ್ನು ನಾನು ಯಾವತ್ತು ಮಾಡಿಕೊಂಡು ಬಂದಿಲ್ಲ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಹರಿಹರ ಕ್ಷೇತ್ರದಲ್ಲಿ ಸುಭದ್ರ ಆಡಳಿತ ಮಾಡುವಂತಹ ನಾಯಕರು ಇಲ್ಲದೇ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದವು. ಇದಕ್ಕೆಲ್ಲ ಪರಿಹಾರ ವಾಗಿ ಬಿಜೆಪಿ ಪಕ್ಷವನ್ನು ಮತ್ತೆ ಗೆಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವಿಜಯಕುಮಾರ್, ಅಶ್ವಿನಿ ಕೃಷ್ಣ, ನಗರಸಭೆ ಮಾಜಿ ಸದಸ್ಯರಾದ ಅಂಬುಜಾ ರಾಜೊಳ್ಳಿ, ನಗರ ಘಟಕದ ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಕಾರ್ಯದರ್ಶಿ ಹೆಚ್. ಮಂಜಾನಾಯ್ಕ್, ತಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಐರಣಿ, ಮುಖಂಡರಾದ ಬಸವನಗೌಡ, ಕೆಂಚನಹಳ್ಳಿ ಮಹಾಂತೇಶಪ್ಪ, ದೇವೇಂದ್ರಪ್ಪ, ಕೃಷ್ಣ ಕೆ.ಜಿ, ಆಟೋ ರಾಜು, ಎನ್.ಇ. ಸುರೇಶ್, ಸಿದ್ದೇಶ್, ಮಹಾಂತೇಶ್, ಹನುಮಂತ ಗೌಡ ಜಿಗಳಿ, ರವಿಕುಮಾರ್, ಸಂತೋಷ ಗುಡಿಮನಿ, ಸುನಿಲ್, ಪ್ರವೀಣ್ ಇತರರು ಹಾಜರಿದ್ದರು.