ಮಾನ್ಯರೇ,
ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾಗಿದ್ದು, ಮತದಾರ ಸಾಕಷ್ಟು ಜಾಗೃತನಾಗಿದ್ದಾನೆ. ಅವನಿಗೆ ಯಾವ ಪಕ್ಷಕ್ಕೆ, ಯಾರಿಗೆ ಮತ ನೀಡಬೇಕೆಂಬ ಅರಿವಿರುತ್ತದೆ. ಈಗಿನ ಚುನಾವಣೆಗಳಲ್ಲಿ ಲಕ್ಷಗಟ್ಟಲೆ ಜನ ಸೇರಿಸುವುದಕ್ಕೆ ಕೋಟಿಗಟ್ಟಲೆ ಹಣ ಪೋಲು ಮಾಡುವುದು, ಅಬ್ಬರದ ಪ್ರಚಾರ, ಹಣ, ಹೆಂಡ ಮತ್ತು ವಸ್ತುಗಳನ್ನು ನೀಡುವುದು ಲಂಚವಾಗಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವುದಿಲ್ಲವೇ? ರಾಜಕಾರಣ, ದೇಶ ಸೇವೆ, ಈಶ ಸೇವೆ ಅನ್ನುವುದು ಹೋಗಿ, ಲೂಟಿ ವ್ಯವಹಾರವಾಗಿರುವುದು ಸರಿಯೇ? ಈಗ ಎಲ್ಲರ ಮನೆಯಲ್ಲಿಯೂ ಟಿ.ವಿ. ಇದ್ದು, ಟಿ.ವಿಗಳ ಮೂಲಕವೇ ಇವರು ಮತದಾರರ ಮನ ಒಲಿಸಬಹುದಲ್ಲವೇ? ಇದು ಯಾರ ದುಡ್ಡು? ಅನ್ಯಾಯದ ಮಾರ್ಗಗಳಲ್ಲಿ ಗಳಿಸಿದ ಹಣವನ್ನು ಮಾತ್ರ ಈ ರೀತಿ ಖರ್ಚು ಮಾಡಲು ಸಾಧ್ಯ. ಹಾಗಾಗಿ ಈಗಿನ ಪ್ರಜಾಪ್ರಭುತ್ವ ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಹಾಗೂ ಶ್ರೀಮಂತರಿಂದ, ಶ್ರೀಮಂತರಿಗಾಗಿ, ಶ್ರೀಮಂತರಿಗೋಸ್ಕರ ಎನ್ನುವಂತಾಗಿದೆ. ಜಾರ್ಜ್ ಬರ್ನಾರ್ಡ್ ಷಾ ಹೇಳಿದಂತೆ ಚುನಾವಣೆ ರಕ್ತಪಾತವಿಲ್ಲದ ಯುದ್ದ. ಯುದ್ಧದಲ್ಲಿ ಆದಷ್ಟೇ ಅನಾಹುತಗಳು, ದುಷ್ಪರಿಣಾಮಗಳು ಚುನಾವಣೆಗಳಲ್ಲಿ ಆಗುತ್ತವೆ.
ಕರ್ನಾಟಕ ರಾಜಕೀಯದ ಆಡಳಿತ ಸೂತ್ರವನ್ನು ಎಲ್ಲಾ ಪಕ್ಷಗಳಲ್ಲೂ ಸೇರಿ ಸರಿ ಸುಮಾರು ನೂರು ಶ್ರೀಮಂತ ಮನೆತನಗಳು ಅಕ್ಟೋಪಸ್ ಹಿಡಿತ ಹೊಂದಿವೆ. ಇವರ ನಂತರ ಇವರ ಮಕ್ಕಳು, ಮೊಮ್ಮಕ್ಕಳು ಆಡಳಿತ ನಡೆಸಲು ರಾಜಕೀಯ ವೃತ್ತಿ ಆರಂಭಿಸುತ್ತಾರೆ. ಇದು ರಾಜಾಡಳಿತವೋ, ಪ್ರಜಾಪ್ರಭುತ್ವವೋ? ಇದು ಬದಲಾಗಲೇಬೇಕು. ಸಾಮಾನ್ಯರೂ ಚುನಾವಣೆಗಳಲ್ಲಿ ಭಾಗವಹಿಸುವಂತಾಗಬೇಕು.
ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವಿಲ್ಲದ ಕೆಲ ಎಡಬಿಡಂಗಿ ರಾಜಕಾರಣಿಗಳು ಎರಡೆರಡು ಕಡೆ ಸ್ಪರ್ಧಿಸುವುದು ಪ್ರಜಾ ಪ್ರಭುತ್ವದ ಒಳ್ಳೆಯ ಲಕ್ಷಣವೇನೂ ಅಲ್ಲ ಹಾಗೂ ಆತ ಒಂದೇ ಕಡೆ ಗೆಲ್ಲುವ ಆತ್ಮವಿಶ್ವಾಸವಿಲ್ಲದ ನಾಯಕ ಎನ್ನುವಂತಾಯಿತು. ಇಂತಹ ರಾಜಕಾರಣಿಗಳು ಪ್ರಜಾಪ್ರಭುತ್ವವನ್ನು ಆಟಿಕೆಯ ಸಾಮಾನಿನ ಮಟ್ಟಕ್ಕೆ ತಂದಿರುವುದು ಪ್ರಜೆಗಳ ದುರಾದೃಷ್ಟ. ಇದರಿಂದಾಗಿ ಮತ್ತೊಮ್ಮೆ ಚುನಾವಣೆ ನಡೆದು ತೆರಿಗೆದಾರರಿಗೆ ಹೊರೆಯೇ ಹೊರತು, ಪ್ರಜಾಪ್ರಭುತ್ವಕ್ಕೆ ಯಾವುದೇ ಅನುಕೂಲವಿಲ್ಲ. ಆದ್ದರಿಂದ ಮತದಾರರು ಇಂತಹ ಎಡಬಿಡಂಗಿ ರಾಜಕಾರಣಿಗಳನ್ನು ಎಲ್ಲಿ ನಿಂತರೂ ಎರಡೂ ಕಡೆ ಸೋಲಿಸಿ ಬುದ್ದಿ ಕಲಿಸಬೇಕಾಗಿದೆ.
ಮಹಿಮಾ ಪಟೇಲ್ (ಮಾಜಿ ಶಾಸಕರು), ಎಮ್. ಸಿದ್ದಯ್ಯ (ವಕೀಲರು), ಅನೀಸ್ ಪಾಷಾ (ವಕೀಲರು), ಶಿವನಕೆರೆ ಬಸವಲಿಂಗಪ್ಪ (ಸಮಾಜ ಸೇವಕರು), ಪ್ರೊ.ಎಂ. ಬಸವರಾಜ್ (ನಿ.ಪ್ರಾಧ್ಯಾಪಕರು)