ಮಾನ್ಯರೇ,
ಹರಿಹರದ ತುಂಗಭದ್ರಾ ಹೊಳೆಯ ಹಳೆಯ ಸೇತುವೆ ಇತಿಹಾಸ ಸೃಷ್ಟಿಸಿದೆ. ಈ ಸೇತುವೆ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಕೊಂಡಿಯಾಗಿ ಶತಮಾನಗಳ ಕಾಲ ಜನರಿಗೆ ಸೇವೆ ನೀಡಿ, ಈಗ ತನ್ನ ಕೆಲಸವನ್ನು ಹೊಸ ಸೇತುವೆಗೆ ಒಪ್ಪಿಸಿದೆ.
ಹೊಸ ಸೇತುವೆ ನಿರ್ಮಾಣವಾದ ನಂತರ ಹಳೆಯ ಸೇತುವೆಯ ಮೇಲೆ ವಾಹನ ಸಂಚಾರವನ್ನು ನಿಷೇಧಿಸಿದೆ. ಇದೀಗ ಶತಮಾನದ ಹರೆಯದ ಸೇತುವೆ ಜನರಿಗೆ ವಾಯುವಿಹಾರ ಮಾಡಲು ತನ್ನ ಸೇವೆಯನ್ನು ನೀಡುತ್ತಿದೆ. ಆದರೆ ಈ ಶತಮಾನದ ಸೇತುವೆಯಲ್ಲಿ ಪುಂಡ ಪೋಕರಿಗಳ ಅಟ್ಟಹಾಸ ಹೆಚ್ಚಾಗಿದೆ. ರಾತ್ರಿಯಾದರೆ ಸಾಕು ಕುಡುಕರ ಅಡ್ಡಾಗಳು ಸೇತುವೆಯ ಸೌಂದರ್ಯವನ್ನು ಹಾಳುಮಾಡುತ್ತಿವೆ.
ಸೇತುವೆಯ ಮೇಲೆ ಇರುವ ನೀರಿನ ಪೈಪುಗಳ ಕೆಳಗೆ ರಾಶಿ-ರಾಶಿ ಕಸ, ಬಿಯರ್ ಬಾಟಲ್‌ಗಳು, ಸಿಗರೇಟ್ ತುಂಡುಗಳು, ಪಾನ್ ಮಸಾಲ ಚೀಟ್ ಗಳು, ಉಗುಳಿದ ಕಲೆಗಳು, ಸೇತುವೆಯ ಅಂದವನ್ನು ಕುಗ್ಗಿಸುತ್ತಿವೆ.
ಸೇತುವೆ ಮೇಲೆ ಮೀನು ಹಿಡಿಯಲು ಕುಳಿತ ಮೀನುಗಾರರು ಪ್ರಾಣ ಭಯವಿಲ್ಲದೆ ಸೇತುವೆ ಗೋಡೆಯ ಮೇಲೆ ಕುಳಿತಿರುತ್ತಾರೆ ಮತ್ತು ಪಾನ್ ಮಸಾಲ ಜಗಿದು ಅಲ್ಲಲ್ಲಿ ಉಗುಳಿರುವುದು ಕಾಣಿಸುತ್ತಿದೆ.
ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಗಾಜಿನ ಚೂರುಗಳು ಗಾಯಗೊಳಿಸುತ್ತಿವೆ ಹಾಗೂ ಇಲ್ಲಿನ ದುಶ್ಚಟಗಳ ತುಂಡುಗಳನ್ನು ಕಂಡು ನಗರದ ಜನರು ಆಕ್ರೋಶ ಹೊರಹಾಕುತ್ತಾ ಅಂಧ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪುಂಡ ಪೋಕರಿಗಳ ಹಾಗೂ ಕುಡುಕರ ಹಾವಳಿಯನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ರಾತ್ರಿ ಹೊತ್ತು ಗಸ್ತು ಹಾಕಬೇಕು ಮತ್ತು ನಗರಸಭೆಯ ಅಧಿಕಾರಿಗಳು ಮಲಿನ ಸೇತುವೆಯನ್ನು ಸ್ವಚ್ಛಗೊಳಿಸಿದರೆ ಕಂಗೊಳಿಸುತ್ತಾ. ಹಿರಿಯ ವಾಯು ವಿಹಾರಿಗಳಿಗೆ ಅನುಕೂಲವಾಗುತ್ತದೆ.
– ಸುನೀಲ್ ಹರಿಹರ, ಪತ್ರಿಕೋದ್ಯಮ ವಿದ್ಯಾರ್ಥಿ