ಮಾನ್ಯರೇ,
ಇತ್ತೀಚೆಗೆ ಪತ್ರಿಕೆಗಳಲ್ಲಿ ನಗರದ ಪೊಲೀಸರು ಅರ್ಧ ಹೆಲ್ಮೆಟ್ ಧರಿಸಿದವರೊಂದಿಗೆ ಅಮಾನವೀಯವಾಗಿ ವರ್ತಿಸಿದ ಸುದ್ದಿ ಓದಿ ಬೇಸರವಾಯಿತು.
ಅರ್ಧ ಹೆಲ್ಮೆಟ್ ಧರಿಸಬಾರದೆಂಬುದರ ಕುರಿತು ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಿದೇ ಈ ರೀತಿ ಏಕಾಏಕಿ ಕ್ರಮ ತೆಗೆದುಕೊಂಡಿದ್ದು ಎಷ್ಟು ಸಮಂಜಸ? ಅಲ್ಲದೇ ಕೆಲವರು ಪೊಲೀಸ್ ಡ್ರೆಸ್‌ನಲ್ಲಿ ಇರಲೇ ಇಲ್ಲ. ಕಾನೂನು, ಅಧಿಕಾರಿಗಳಿಗೊಂದು, ಸಾರ್ವಜನಿಕರಿಗೊಂದು ಎಂದು ಇದೆಯೇ?
ನಗರದಲ್ಲಿ ತಿರುಗಾಡುವವರು ವೇಗ ನಿಯಂತ್ರಣ ಅಳವಡಿಸಿಕೊ ಳ್ಳುವಂತೆ ಒತ್ತಾಯ ಮಾಡುವುದು ಒಳ್ಳೆಯದು. ಅದು ಬಿಟ್ಟು ಈ ರೀತಿ ದಿನಕ್ಕೊಂದು ಹೊಸ ನೀತಿಯನ್ನು ಇದ್ದಕ್ಕಿದ್ದಂತೆ ನಾಗರಿಕರ ಮೇಲೆ ಹೇರುವುದು ಮೊದಲೇ ಕೊರೊನಾ ಹಾವಳಿಯಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಹೊಸ ನೀತಿಗಳು ನುಂಗಲಾರದ ತುತ್ತಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸಾಮಾನ್ಯ ಜನರಿಗೆ ಹೊರೆಯಾಗದಂತೆ ಆದೇಶ ಹೊರಡಿಸಬೇಕೆಂದು ವಿನಂತಿ.
– ಸಿ.ಕೆ. ಆನಂದತೀರ್ಥಾಚಾರ್, ಜ್ಯೋತಿಷಿ, ದಾವಣಗೆರೆ.