ಮಾನ್ಯರೇ,
ಜಿಲ್ಲಾ ರಕ್ಷಣಾಧಿಕಾರಿಗಳು ಐಎಸ್ಐ ಮಾರ್ಕಿನ ಹೆಲ್ಮೆಟ್ ಗಳನ್ನು ಕಡ್ಡಾಯಗೊಳಿಸಿರು ವುದನ್ನು ನೋಡಿದರೆ, ಯಾವುದೋ ಪ್ರಭಾವಕ್ಕೊ ಳಗಾಗಿ ಅಥವಾ ಕಾಣದ ಕೈಗಳ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ.
ದಾವಣಗೆರೆ ನಗರ ದಕ್ಷಿಣದಿಂದ ಉತ್ತರ-ಉತ್ತರದಿಂದ ದಕ್ಷಿಣಕ್ಕೆ 6 ರಿಂದ 7 ಕಿ.ಮೀ ಮಾತ್ರ ಇದೆ. ನಮ್ಮ ನಗರದಲ್ಲಿ ಬೃಹತ್ ಸಾರಿಗೆ ಸಂಚಾರ ಕೂಡ ಇಲ್ಲ. ಹದಡಿ ರಸ್ತೆ, ಪಿ.ಬಿ.ರಸ್ತೆ, ಜಗಳೂರು ರಸ್ತೆ, ರಿಂಗ್ ರಸ್ತೆ ಈ ನಾಲ್ಕು ರಸ್ತೆಗಳನ್ನು ಹೊರತುಪಡಿಸಿದರೆ, ನಗರದಲ್ಲಿ ಮತ್ತೆಲ್ಲೂ ವಿಶಾಲ ರಸ್ತೆ ಕಂಡುಬರುವುದಿಲ್ಲ.
ನಾಗರಿಕರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತಲುಪಲು ಕೇವಲ 20 ರಿಂದ 30 ಕಿ.ಮೀ ವೇಗದಲ್ಲಿ ಚಲಾವಣೆ ಮಾಡಿದರೆ ಸಾಕು ತಲುಪಬಹುದು. ಬೃಹತ್ ನಗರಗಳಂತೆ ನಮ್ಮಲ್ಲಿ ಒಂದು ಜಾಗದಿಂದ ಒಂದು ಜಾಗ ತಲುಪಲು ಗಂಟೆ ಗಟ್ಟಲೇ ವಾಹನ ಚಾಲನೆ ಮಾಡುವ ಅವಶ್ಯಕತೆ ಕೂಡ ಇಲ್ಲ.
ಸುಪ್ರೀಂ ಕೋರ್ಟ್ ಐಎಸ್ಐ ಹೆಲ್ಮೆಟ್ ಕಡ್ಡಾಯದ ತೀರ್ಪು ದೇಶದ ಎಲ್ಲಾ ನಗರಗಳಿಗೂ ಅನ್ವಯಿಸುತ್ತದೆ ಯಾದರೆ, ನಮ್ಮ ಪಕ್ಕದ ಜಿಲ್ಲೆಯಾದ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಇಲ್ಲಿ ಯಾರಿಗೂ ಅನ್ವಯಿಸದ ಕಾನೂನು ನಮ್ಮ ಜಿಲ್ಲೆಯಲ್ಲಿ 3 ತಿಂಗಳಿಗೊಮ್ಮೆ 6 ತಿಂಗಳಿಗೊಮ್ಮೆ ಅನ್ವಯಿಸುತ್ತಿರುವುದನ್ನು ನೋಡಿದರೆ, ಕಾಣದ ಕೈ ಒತ್ತಡ ಇದೆಯೇ ಎಂದು ಅನುಮಾನ ಮೂಡುತ್ತಿದೆ.
ಯಾವುದೇ ಕಾನೂನು ಅಥವಾ ನ್ಯಾಯಾಲಯದ ಆದೇಶ ಇಡೀ ದೇಶಕ್ಕೆ ಅನ್ವಯವಾಗಿದ್ದೂ ಕೂಡ ನಗರದ ನಾಗರಿಕರಿಗೆ ಪ್ರತಿ 3 ರಿಂದ 6 ತಿಂಗಳಿಗೊಮ್ಮೆ ಈ ಹೆಲ್ಮೆಟ್ ಕಡ್ಡಾಯದ ಕಿರುಕುಳ ಪದೇ ಪದೇ ಏಕೆ ?
ಇದಕ್ಕೂ ಮಿಗಿಲಾಗಿ ಐಎಸ್ಐ ಮಾರ್ಕಿನ ಹೆಲ್ಮೆಟ್ ಕಡ್ಡಾಯ ಕಾನೂನನ್ನು ಅಳವಡಿಸಲೇ ಬೇಕೆಂದಿದ್ದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಹಾಗೂ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಿದರೆ, ಇದು ಜನ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಇದನ್ನು ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳು, ಸಾರಿಗೆ ಸಂಚಾರಿ ಪೊಲೀಸ್‌ಗಳು ಹಾಗೂ ಜನಪ್ರತಿನಿಧಿಗಳು ಒಂದು ಕಡೆ ಕೂತು ಚರ್ಚಿಸಿ, ಜನಪರ ನಿರ್ಧಾರ ತೆಗೆದುಕೊಂಡರೆ, ನಗರದ ಸಾರ್ವಜನಿಕರಿಗೆ ಕಿರುಕುಳ ತಪ್ಪುತ್ತದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರ ಪ್ರಾಣ ಉಳಿಸಬೇಕಾಗಿ ಕೋರುತ್ತೇನೆ.
– ಶಿವನಳ್ಳಿ ರಮೇಶ್, ಮಾಜಿ ಸದಸ್ಯರು, ಮಹಾನಗರ ಪಾಲಿಕೆ