ದಾರಿ ತಪ್ಪಿದ ಯುವಕರಿಗೆ ‘ಹನುಮಂತರಾಯ’ ಸಂಜೀವನಾಗಲಿ

ಮಾನ್ಯರೇ,

1965 ರಲ್ಲಿ ಭೂಮಿಗೆ ತುಂಬಾ ಅಪಾಯಕಾರಿ ಎಂದು ಡಿಡಿಟಿ ಪೌಡರನ್ನು ಬ್ಯಾನ್ ಮಾಡಿದ್ದರು. ಆದರೆ ಭೂಮಿ ಪುತ್ರರಾದ ಯುವ ಜನಾಂಗಕ್ಕೆ ಈಗಿನ ಡಿಡಿಟಿ (ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೋ) ಯಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದ್ದರೂ ಇದನ್ನು ಬ್ಯಾನ್ ಮಾಡದಿರುವುದು ಶೋಚನೀಯ.

ಒಂದು ದೇಶವನ್ನು ನಾಶ ಮಾಡಲು ಅಣುಬಾಂಬ್, ನ್ಯೂಕ್ಲಿಯರ್ ಮಿಸೈಲ್ ಅಥವಾ ಶತ್ರು ರಾಷ್ಟ್ರದ ದಾಳಿ ಬೇಕಿಲ್ಲ. ಆ ದೇಶದ ಯುವ ಜನತೆಯನ್ನು ದುಶ್ಚಟಗಳ ದಾಸರನ್ನಾಗಿ ಮಾಡಿದರಷ್ಟೇ ಸಾಕು. ಯುವಕರ ನಾಶದಿಂದ ಆ ನಾಡು ಅನಾಥ ಮಕ್ಕಳ, ವಿಧವೆಯರ, ಮುದುಕರ ಕೊಂಪೆಯಾಗುತ್ತದೆ.

ಮನಶಾಸ್ತ್ರಜ್ಞರ ಪ್ರಕಾರ ಡ್ರಿಂಕ್ಸ್ ಒಮ್ಮೆ ತೆಗೆದುಕೊಂಡರೆ ನಂತರ ಬಿಡುವ ಮನಸಿದ್ದರೆ ಬಿಡಬಹುದು. ಆದರೆ ಡ್ರಗ್ಸ್ ಒಮ್ಮೆ ತೆಗೆದುಕೊಂಡರೆ ಬಿಡಲಾಗುವುದಿಲ್ಲ ಎಂದಿದ್ದಾರೆ. ಇಂತಹ ವಿಷ ಎಲ್ಲರ ದೇಹ ಸೇರಿ ಕೆಟ್ಟ ಸಮಾಜ ನಿರ್ಮಾಣವಾಗುವ ಮುನ್ನ ದಕ್ಷ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಂಡು ಕಾರ್ಯವೆಸಗಬೇಕು. ಸಾರ್ವಜನಿಕರು ಸಹ ಸಮಾಜದ ಹಿತದೃಷ್ಟಿಯಿಂದ ಮಾಹಿತಿ ಇದ್ದವರು ಜೀವ ಉಳಿಸುವ ಸದಾಶಯದಿಂದ ಪೊಲೀಸರಿಗೆ ಗುಪ್ತ ಮಾಹಿತಿ ನೀಡಬೇಕಾಗಿ ವಿನಂತಿ.

ದಾವಣಗೆರೆಯಲ್ಲೂ ಡ್ರಗ್ಸ್ ಹಾವಳಿಯಿದೆ ಎಂಬ ವದಂತಿಯಿದ್ದು, ಗೃಹ ಸಚಿವ ಬೊಮ್ಮಾಯಿ ಅವರ ಪ್ರೀತಿಯ ಅಧಿಕಾರಿಯಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಅವರ ಸೇನೆ ಹೋರಾಟ ನಡೆಸಿ, ಡ್ರಗ್ಸ್ ಎಂಬ ಕಳೆ, ಕೊಳೆ ಇದ್ದಲ್ಲಿ ಕಿತ್ತೆಸೆದು ಯುವ ಲಕ್ಷ್ಮಣರಿಗೆ ಸಂಜೀವನಾಗಿ ಬರಲಿ ಎಂದು ನಮ್ಮ ಮನವಿ.

– ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ.

error: Content is protected !!