ಮಾನ್ಯರೇ,
ಕೊರೊನಾ ಕೆಲವರಿಗೆ ವಾರ, ಕೆಲವರಿಗೆ ಹದಿನೈದು ದಿನ, ಇನ್ನು ಕೆಲವರಿಗೆ ತಿಂಗಳ ಕಾಲ ಕಾಡುತ್ತದೆ. ಆದರೆ, ನನಗೆ ಕಾಡಿದ್ದು ಒಂದೇ ದಿನ. ಯಾಕೆಂದರೆ ಬಂದಿದ್ದು ನಿಜವಾದ ಕೊರೊನಾ ಅಲ್ಲ, ಟೆಸ್ಟ್‌ನಲ್ಲಿ ಬಂದಿದ್ದ ಹುಸಿ ಕೊರೊನಾ!
ಮಹಾರಾಷ್ಟ್ರದ ಮೂಲದ ಹಾಗೂ ದಾವಣಗೆರೆಯಲ್ಲಿ ವೈದ್ಯಕೀಯ ಪಿ.ಜಿ.ಯಲ್ಲಿರುವ ವಿದ್ಯಾರ್ಥಿನಿ ನಾನು. ಹಾಸ್ಟೆಲ್‌ನಲ್ಲಿ ವಾಸ. ರಜೆ ಬಿಡುವಿನ ವೇಳೆ ಮಹಾರಾಷ್ಟ್ರದ ತವರಿಗೆ ವಾಪಸ್ಸಾಗಿದ್ದೆ.
ಅಲ್ಲೆಲ್ಲ ಕೊರೊನಾ ವ್ಯಾಪಕವಾಗಿ ಹರಡಿತ್ತು. ಹೀಗಾಗಿ ಅಲ್ಲಿದ್ದ 20ಕ್ಕೂ ಹೆಚ್ಚು ದಿನ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದೆ. ವಾಪಸ್ ದಾವಣಗೆರೆಗೆ ಬರುವಾಗಲೂ, ಜನರ ಸಂಪರ್ಕ ಕಡಿಮೆ ಇರಲಿ ಎಂದು ರೈಲಿನ ಎ.ಸಿ. ಬೋಗಿಯಲ್ಲೇ ಇದ್ದೆ. 20 ಗಂಟೆಗಳ ಪ್ರವಾಸದ ಉದ್ದಕ್ಕೂ ಮಾಸ್ಕ್, ಗ್ಲೌಸ್ ಬಿಟ್ಟಿದ್ದೇ ಇಲ್ಲ.
ರೈಲಿನಲ್ಲಿ ಎಲ್ಲರಿಂದ ದೂರ ದೂರ. ಹೇಳಿ ಕೇಳಿ, ವೈದ್ಯೆಯಾದ ಕಾರಣ ಕೊರೊನಾದಿಂದ ಎಚ್ಚರಿಕೆ ವಹಿಸುವ ಬಗ್ಗೆ ಸ್ವಲ್ಪ ಚೆನ್ನಾಗಿಯೇ ಗೊತ್ತು ಎಂದು ಹೇಳಬಲ್ಲೆ.
ಹೀಗೆ ಸುಸೂತ್ರವಾಗಿ ದಾವಣಗೆರೆಗೆ ಬಂದಿಳಿದಾಗ ಬೆಳಿಗ್ಗೆ 3 ಗಂಟೆ ಸಮಯ. ಆಗ ಪರ ರಾಜ್ಯದಿಂದ ಬಂದವರನ್ನು ಪರೀಕ್ಷೆಗೆ ಕರೆದೊಯ್ಯುವುದಾಗಿ ಇಲ್ಲಿನ ಅಧಿಕಾರಿಗಳು ಹೇಳಿದರು. ತಕ್ಷಣವೇ ಪ್ರಯಾಣ ಮಾಡಿ ಬಂದ ನಮ್ಮೆಲ್ಲರನ್ನೂ ತಾಪಮಾನ, ಪಲ್ಸ್ ಆಕ್ಸಿಮೀಟರ್ ಪರೀಕ್ಷೆ ನಡೆಸಲಾಯಿತು. ಅದೆಲ್ಲ ನಾರ್ಮಲ್ ಆಗಿತ್ತು. ಇನ್ನಷ್ಟು ಸಮಾಧಾನವಾಯಿತು.
ಆದರೆ, ಪರೀಕ್ಷೆಗೆ ಕರೆದೊಯ್ಯಲು ಬಂದಿದ್ದ ಬಸ್‌ನಲ್ಲೇ ಸಾಮಾಜಿಕ ಅಂತರ ಇರಲಿಲ್ಲ! ಅಯ್ಯೋ, ರಾಜ್ಯದಿಂದ ರಾಜ್ಯಕ್ಕೆ ಬಂದಾಗ ಇದ್ದ ಅಂತರ ಇಲ್ಲಿ ಇಲ್ಲವಾಯಿತಲ್ಲ ಎಂಬ ಕೊರಗಿನಲ್ಲೇ ಬಸ್ ಹತ್ತಿದೆ.
ಬೆಳಿಗ್ಗೆ 3.30 – 4 ಗಂಟೆ ಸಮಯದಲ್ಲಿ ಪರೀಕ್ಷೆಯಾಯಿತು. ಮೂರು ದಿನಗಳಲ್ಲಿ ರಿಸಲ್ಟ್ ಬರುತ್ತದೆ ಎಂದು ನನಗೆ ತಿಳಿಸಲಾಯಿತು. ಆದರೆ, ಮರು ದಿನ ಬೆಳಿಗ್ಗೆ 10 ಗಂಟೆ ವೇಳೆಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ನನಗೆ ಕರೆ ಮಾಡಲಾಯಿತು.
ಅಲ್ಲಿಂದ ಶುರುವಾಯಿತು ನೋಡಿ, ಕನಿಷ್ಠ ಆರು ಮೊಬೈಲ್ ಸಂಖ್ಯೆಗಳಿಂದ ನಿಮಗೆ ಕೊರೊನಾ ಬಂದಿದೆ… ಕೊರೊನಾ ಬಂದಿದೆ… ಎಂಬ ದೂರವಾಣಿ ಸಂದೇಶದ ರಭಸ. ನನಗೆ ಈ ಬಗ್ಗೆ ಅನುಮಾನ. ಕೊರೊನಾ ಪಾಸಿಟಿವ್ ಬಂದರೆ ನನ್ನ ಮೊಬೈಲ್‌ಗೆ ಸರ್ಕಾರದ ವತಿಯಿಂದ ಮೆಸೇಜ್ ಬರಬೇಕು ಎಂಬ ನಿರೀಕ್ಷೆ.
ಈ ಬಗ್ಗೆ ನಾನು ಸ್ಪಷ್ಟನೆ ಕೇಳಿದೆ. ಒಂದೋ ಮೆಸೇಜ್ ಕಳಿಸಿ, ಇಲ್ಲವೇ ವಾಟ್ಸ್‌ಅಪ್‌ಗೆ ಪಾಸಿಟಿವ್ ಬಂದ ವರದಿ ಕಳಿಸಿ ಎಂದು ಕೇಳಿದೆ. ಇದ್ಯಾವುದೂ ಇಲ್ಲ ಎಂಬ ಉತ್ತರ ಕೇಳಿ ಮತ್ತಷ್ಟು ಕಳವಳವಾಯಿತು.
ಕೊನೆಗೆ ಆಗಸ್ಟ್ 10ರ ಬೆಳಿಗ್ಗೆ ಜೆ.ಜೆ.ಎಂ.ಸಿ. ಆಸ್ಪತ್ರೆಗೆ ತೆರಳಿ ನಾನೇ ಕೈಯಿಂದ 3,000 ರೂ. ಖರ್ಚು ಮಾಡಿ ಇನ್ನೊಂದು ಆರ್.ಟಿ. – ಪಿ.ಸಿ.ಆರ್. ಪರೀಕ್ಷೆ ಮಾಡಿಸಿದೆ. ಸಂಜೆಯೇ ಫಲಿತಾಂಶ ನೆಗೆಟಿವ್ ಬಂತು! ಮಳೆ ನಿಂತರೂ ಜಿಟಿ ಜಿಟಿ ನಿಲ್ಲಲಿಲ್ಲ ಎಂಬಂತೆ ಮರು ದಿನವೂ ಕರೆ ಬಂದವು, ಆಗ ಅವರಿಗೆ ನೆಗೆಟಿವ್ ಬಂದ ವಿಷಯ ತಿಳಿಸಿದೆ. ಆನಂತರವೇ ನನ್ನ ಮೊಬೈಲ್‌ಗೆ ಕೊರೊನಾ ಕರೆಗಳಿಂದ ಶಾಂತಿ ಸಿಕ್ಕಿದ್ದು!
ಈಗ ನನ್ನಲ್ಲಿ ಮೂಡಿರುವ ಪ್ರಶ್ನೆ ಎಂದರೆ, ಇನ್ನೂ ಎಷ್ಟು ಜನಕ್ಕೆ ಈ ರೀತಿ ಆಗಿರಬಹುದು? ನಾನು ಸ್ವತಃ ವೈದ್ಯೆ, ಇನ್ನೊಂದು ಪರೀಕ್ಷೆಗೆ 3,000 ರೂ. ಖರ್ಚು ಮಾಡುವ ಸಾಮರ್ಥ್ಯ ಇದೆ. ಎಷ್ಟು ಬಡವರಿಗೆ ಇಷ್ಟು ಸಾಮರ್ಥ್ಯ ಇದೆ? ಅವರಿಗೆ ಹೀಗೇನಾದರೂ ಆದರೆ ಗತಿ ಏನು? ಕೊರೊನಾ ಬಂತು ಎಂದು ಮಾನಸಿಕವಾಗಿ ಆಘಾತವಾಗಿ ಸಮಸ್ಯೆಯಾದರೆ?
ತಪ್ಪಾಗಿ ಪಾಸಿಟಿವ್ ಬಂದು, ರೋಗ ಇಲ್ಲದವರನ್ನೂ ಕರೆದುಕೊಂಡು ಹೋಗಿ ರೋಗಿಗಳ ಜೊತೆ ಬಿಟ್ಟರೆ ಅವರ ಗತಿ ಏನು? ಇಂತಹ ವರದಿಯಿಂದ ನೆರೆ ಹೊರೆಯವರು ಅವರನ್ನು ದೂರವಿಟ್ಟರೆ? ಪ್ರಶ್ನೆಗಳು ಹಲವಿವೆ. ಉತ್ತರ ಮಾತ್ರ ಸಿಕ್ಕಿಲ್ಲ.
– ಓರ್ವ ಪಿ.ಜಿ. ವೈದ್ಯಕೀಯ ವಿದ್ಯಾರ್ಥಿನಿ