ಮಾನ್ಯರೇ,
ವಿಶ್ವವೇ ಗ್ರಾಮವಾದ ಪ್ರಸ್ತುತ ಜಗತ್ತಿನಲ್ಲಿ ವಿಶ್ವವಿದ್ಯಾಲಯದ ಕೆಲ ನಿಯಮಾವಳಿಗಳಿಂದ ಉನ್ನತ ಶಿಕ್ಷಣದಿಂದ ಉದ್ಯೊಗಸ್ಥ ಮಹಿಳೆಯರು ವಂಚಿತರಾಗುವಂತಾಗಿದೆ.
ಸದ್ಯ ಕರ್ನಾಟಕದಲ್ಲಿ ದೂರಶಿಕ್ಷಣ ಪ್ರವೇಶ ಕೆಎಸ್‌ಒಯು (ಕರ್ನಾಟಕ ಸ್ಟೇಟ್ ಓಪನ್ ಯೂನಿವರ್ಸಿಟಿ) ಮೈಸೂರು ಇಲ್ಲಿ ಮಾತ್ರ ಲಭ್ಯವಿದೆ. ಎಂ.ಎ., ಎಂ.ಕಾಂ., ಎಂ.ಎಸ್ಸಿ ಕೋರ್ಸ್‌ಗಳಿಗೆ ಪ್ರವೇಶ ಕರೆದ ವಿಶ್ವವಿದ್ಯಾಲಯವು ಎಂ.ಎಸ್ಸಿ ಹೊರತುಪಡಿಸಿ ಉಳಿದ ಕೋರ್ಸ್‌ಗಳಿಗೆ ಪ್ರಾದೇಶಿಕ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಎಂ.ಎಸ್ಸಿಗೆ ಈ ಅವಕಾಶ ಇಲ್ಲ. ದಾವಣಗೆರೆ ಪ್ರಾದೇಶಿಕ ಕಛೇರಿಯ ಅಧಿಕಾರಿಗಳನ್ನು ಈ ಸಂಬಂಧವಾಗಿ ವಿಚಾರಿಸಿದರೆ, `ಎಂ.ಎಸ್ಸಿ ಕೋರ್ಸ್ ಕಡಿಮೆ ವಿದ್ಯಾರ್ಥಿಗಳು ತೆಗೆದುಕೊಳ್ಳುವುದರಿಂದ ಪರೀಕ್ಷೆಯನ್ನು ಮೈಸೂರಿನಲ್ಲೇ ಬರೆಯಬೇಕು’ ಎಂದು ಹೇಳುತ್ತಾರೆ. ವಿವಿಧ ಕೋರ್ಸ್‌ಗಳ ಪರೀಕ್ಷೆಯನ್ನು ಪ್ರಾದೇಶಿಕ ಕೇಂದ್ರದ ಮಟ್ಟದಲ್ಲೇ ನಡೆಸುವಾಗ ಎಂ.ಎಸ್ಸಿ ಪರೀಕ್ಷೆಯನ್ನು ನಡೆಸಲು ಯಾವ ತಾಂತ್ರಿಕ ಸಮಸ್ಯೆಯೋ ಅರಿಯದಾಗಿದೆ
ಕುಟುಂಬ ಮತ್ತು ಉದ್ಯೋಗ ಎರಡನ್ನೂ ಒಟ್ಟೊಟ್ಟಿಗೆ ನಿಭಾಯಿಸುವ ಮಹಿಳೆಯರಿಗೆ ಮೈಸೂರಿಗೆ ಹೋಗಿ ಹತ್ತಾರು ದಿನ ತಂಗಿ ಎಂ.ಎಸ್ಸಿ ಪರೀಕ್ಷೆ ಬರೆಯಲು ತೀರಾ ಸಮಸ್ಯೆಯೇ ಆಗುತ್ತದೆ. ಕೋವಿಡ್‌ನಂತಹ ವಿಷಮ ರೋಗದ ನಡುವೆ ಈ ರೀತಿಯ ನಡಾವಳಿ ಸರಿಯೂ ಅಲ್ಲ, ದೂರದ ಗುಲ್ಬರ್ಗದಿಂದ ಮೈಸೂರಿಗೆ ಬಂದು ಪರೀಕ್ಷೆ ಬರೆಯುವುದು ಖರ್ಚಿನ ದೃಷ್ಟಿಯಿಂದ ದುಬಾರಿಯೂ ಹೌದು, ಮೊದಲಿನಂತೆ ರಾಜ್ಯದ ಕೆಲವೊಂದು ವಿಶ್ವವಿದ್ಯಾಲಯಗಳು ದೂರಶಿಕ್ಷಣ ಕೋರ್ಸ್ ಅನ್ನು ನಡೆಸಿದ್ದರೆ ಈ ತೊಂದರೆ ವಿದ್ಯಾರ್ಥಿಗಳಿಗೆ ಆಗುತ್ತಿರಲಿಲ್ಲ. ಪ್ರಸ್ತುತ ಕೆಎಸ್‌ಒಯು ಮಾತ್ರ ದೂರಶಿಕ್ಷಣ ಕೊರ್ಸನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಅದರಲ್ಲೂ, ಮಹಿಳಾ ವಿದ್ಯಾರ್ಥಿಗಳಿಗೆ ಎಂ.ಎಸ್ಸಿ., ಪರೀಕ್ಷೆಯನ್ನು ಅಥವಾ ಥಿಯರಿ ಪರೀಕ್ಷೆಯನ್ನು ಕೆಎಸ್‌ಒಯು ವಿಶ್ವವಿದ್ಯಾಲಯದ ಪ್ರಾದೇಶಿಕ ಕಛೇರಿಗಳು ಇರುವ ಸ್ಥಳಗಳಲ್ಲೇ ನಡೆಸಿದರೆ ಎಲ್ಲಾ ದೂರಶಿಕ್ಷಣ ವಿದ್ಯಾರ್ಥಿಗಳಿಗೆ ತುಂಬಾ ಅನೂಕೂಲವಾಗುತ್ತದೆ.
– ಮಮತಾ ಎಂ. ಬಾವಿಕಟ್ಟಿ, ದಾವಣಗೆರೆ.