ಇದ್ಯಾವ ನ್ಯಾಯ?

ಮಾನ್ಯರೇ,

ಸರ್ಕಾರಿ ಶಾಲಾ ಶಿಕ್ಷಕರ ವೇತನದಲ್ಲಿ ಒಂದಷ್ಟು ಭಾಗ ಖಾಸಗಿ ಶಾಲಾ ಶಿಕ್ಷಕರಿಗೆ ಕೊಡುವ ಮನಸ್ಸು ಮಾಡಿ ಎಂದು ಶಿಕ್ಷಣ ಸಚಿವರು ಮಾನವೀಯ ದೃಷ್ಟಿಯಿಂದ ವಿನಂತಿ ಮಾಡಿರುವ ಸುದ್ದಿ ಹರಿದಾಡಿ ನೂರಾರು ಚರ್ಚೆಗೆ ಗ್ರಾಸವಾಗಿದೆ.

ಕರೋನ ಕಾಲದ ಈ ಕ್ಷಣಗಳಲ್ಲಿ ಬಹಳಷ್ಟು ಇಲಾಖೆಯ ನೌಕರರು ಜೀವ ಒತ್ತೆ ಇಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆ, ಶಿಕ್ಷಕರು, ಮಕ್ಕಳು ಇಲ್ಲದ ಈ ಹೊತ್ತಿನಲ್ಲಿ ಕೊರೊನಾ ಭಯ ಎಲ್ಲೆಡೆ ಆವರಿಸಿ ಜೀವ ಕೈಲಿ ಹಿಡಿದು ಬದುಕುವ ಪರಿಸ್ಥಿತಿ ಇದೆ. ಇದರ ನಡುವೆ ಕೆಲವು ಸರ್ಕಾರಿ ಶಿಕ್ಷಕರು ಆರೋಗ್ಯ ಸಮೀಕ್ಷೆ, ಹೊರಗಿಂದ ಬಂದವರ ಸಮೀಕ್ಷೆ, ತಪಾಸಣಾ ನಿಲ್ದಾಣ (ಚೆಕ್ ಪೋಸ್ಟ್) ಗಳಲ್ಲಿ ಅವಲೋಕನ, ಸ್ಥಳೀಯ ಶಿಕ್ಷಕರು ಸಾರ್ವಜನಿಕರ ಅಹವಾಲಿಗೆ ( ದೃಢೀಕರಣ, ವರ್ಗಾವಣೆ ಪತ್ರ ,ಹಳೆಯ ಅಂಕಪಟ್ಟಿ, ಗ್ರಾಮೀಣ ಪ್ರಮಾಣ ಪತ್ರ,) ಸ್ಪಂದಿಸುವ ಕೆಲಸ, ಎಸ್ ಎಸ್ ಎಲ್ ಸಿ ಕೇಂದ್ರ ಇದ್ದೆಡೆ ಮತ್ತು ಹೊರಗಡೆ ಪರೀಕ್ಷಾ ಕಾರ್ಯ, ಮೌಲ್ಯಮಾಪನ ಕೆಲಸ , ಪರೀಕ್ಷಾ ಪೂರ್ವ ಜಿಲ್ಲಾವಾರು ಆನ್ ಲೈನ್ ಪೂರ್ವ ಸಿದ್ಧತಾ ಪರೀಕ್ಷೆ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡೇ ಇದ್ದಾರೆ.

ಇಷ್ಟಾಗಿಯೂ….ಸರ್ಕಾರಿ ಶಿಕ್ಷಕರು ಕೂತು, ನಿಂತು, ಬರೀ ಸಹಿ ಹಾಕಿ ಸಂಬಳ ಪಡೆಯುತ್ತಾರೆಂಬ ಕುಹಕ ಕೆಲವೆಡೆ ಕೆಲವರು ಮಾಡುತ್ತಿರುವುದು ಹಾಸ್ಯಾಸ್ಪದ. ಬೇಕೆಂದೇ ಶಿಕ್ಷಕರು ಶಾಲೆಗೆ ಹೋಗುತ್ತಿಲ್ಲವಲ್ಲ? ಸರ್ಕಾರದ ಆದೇಶ, ಕೊರೊನಾ ನಿಯಂತ್ರಣದ ಪಾತ್ರವಹಿಸುತ್ತಿರುವ ಶಿಕ್ಷಕರ ಮೇಲೆ ಹಳದಿ ಕಣ್ಣೇಕೋ?

ಇನ್ನೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುವ ಶಿಕ್ಷಕರ ಗೋಳನ್ನೂ ಕೇಳಬೇಕಿದೆ. ಆದರೆ ಅದಕ್ಕೆ ಮೊದಲು ತಲೆ ಕೊಡಬೇಕಾದವರು ಯಾರು? ಆಯಾ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ತಾನೇ? ಪ್ಲೇ ಗ್ರೂಪ್ ನಿಂದ ಹಿಡಿದು ಉನ್ನತ ತರಗತಿವರೆಗೂ ಲಕ್ಷಗಟ್ಟಲೆ  ವಸೂಲು ಮಾಡುವ ಕ್ರಮಕ್ಕೆ ಕಡಿವಾಣವಂತೂ ಇಲ್ಲ. ಅವರಿಗೆ ಅವರದೇ ಆದ ಖರ್ಚು, ವೆಚ್ಚ ಇರಬಹುದು.ಹಾಗೆಂದು ಸರಕಾರಿ ಶಿಕ್ಷಕರ ವೇತನದಲ್ಲಿ ಇಷ್ಟು ಅಂತ ಕಸಿದು ಖಾಸಗಿ ಶಿಕ್ಷಕ ಮಿತ್ರರಿಗೆ ಕೊಟ್ಟರೆ ನ್ಯಾಯವೇ? ಅಂತಹ ಮೊತ್ತ ಪಾಪ ಆ ಖಾಸಗಿಯ ಅರೆಕಾಲಿಕ ಶಿಕ್ಷಕರು ಸ್ವೀಕರಿಸುವರೇ?

ಸುತ್ತಿ ಬಳಸಿ ಸರ್ಕಾರಿ ಶಿಕ್ಷಕರ ಮೇಲೆ ಕಣ್ಣಾದರೆ ಅದಕ್ಕೆ ನೂರಾರು ಮಾರ್ಗಗಳಿವೆ. ಡೊನೇಷನ್‌ನಿಂದ ಅಥವಾ ಅಪಾರ ಫೀ ವಸೂಲಿನಲ್ಲಿ ಇಷ್ಟು ಅಂತ ತೆಗೆದು ಕೊಟ್ಟರೂ ಆಯಿತು. ಇನ್ನೂ ಮುಂದುವರೆದು ಖಾಸಗಿ ಶಿಕ್ಷಕರನ್ನು ಕೆಲಸದಿಂದ ತೆಗೆಯಬೇಡಿ, ಹೇಗಾದರೂ ಅವರಿಗೆ ಗೌರವ ಧನ ಕೊಡಿ ಎಂದು ಶಿಕ್ಷಣ ಸಚಿವರು ಒಂದು ಆದೇಶ ಜಾರಿಗೊಳಿಸಲಿ. ಅವರೂ ಶಿಕ್ಷಕರು,ಇವರೂ ಶಿಕ್ಷಕರು ಇಬ್ಬರ ಶ್ರೇಯೋಭಿಲಾಷೆಗೆ ಸಂಬಂಧಿಸಿದವರು ಚಿಂತಿಸಲಿ. ಇಲ್ಲದೇ ಹೋದರೆ ಶಿಕ್ಷಕರ ನಡುವೆ ಭಿನ್ನ ಭಾವದ ಕಂದರ ಏರ್ಪಟ್ಟೀತು.

– ಫೈಜ್ನಟ್ರಾಜ್, ಸಂತೆಬೆನ್ನೂರು.
[email protected]

error: Content is protected !!