ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ ಮಾಡಿ

ಮಾನ್ಯರೇ,

ರಾಜ್ಯಾದ್ಯಂತ ಕೊರೊನಾ ಸೋಂಕು ಯಾವುದಕ್ಕೂ ಜಗ್ಗದೆ ಗಲ್ಲಿಗಲ್ಲಿಗಳಲ್ಲಿ ಮನೆಮನೆಗಳಲ್ಲಿ ರಣ ಭೀಕರವಾಗಿ ಶರವೇಗದಲ್ಲಿ ನುಗ್ಗುತ್ತಿದೆ. ರಾಜ್ಯದಲ್ಲಿಯೂ  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಎತ್ತ ನೋಡಿದರೂ ಆಸ್ಪತ್ರೆಗಳು  ಸೋಂಕಿತರಿಂದಲೇ ತುಂಬಿತುಳುಕುತ್ತಿವೆ. ಯಾವುದೇ ನೇರ ಸಂಪರ್ಕ ಹೊಂದಿರದ, ಸೋಂಕಿನ ಲಕ್ಷಣಗಳು  ಕಾಣಿಸದ, ಗಾಳಿಯಲ್ಲಿಯೂ ಕೂಡ ಹರಡಿ ಜನರನ್ನು  ಭಯಭೀತರನ್ನಾಗಿಸುತ್ತಿದೆ. ಕರೋನಾ ಸೋಂಕು  ಸಮುದಾಯಕ್ಕೆ ಹಬ್ಬಿರುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಈವರೆಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರದ ನಿರ್ಲಕ್ಷ್ಯದಿಂದಲೋ ಅಥವಾ ಜನಸಾಮಾನ್ಯರ ನಿರ್ಲಕ್ಷ್ಯದಿಂದಲೋ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ. ಇನ್ನು ರಾಜ್ಯದಲ್ಲಿ ಜುಲೈ ಆಗಸ್ಟ್ ತಿಂಗಳ ಅಂತ್ಯಕ್ಕೆ ಸೋಂಕಿತರ ಸಂಖ್ಯೆ  ಲಕ್ಷ ದಾಟಿದರೂ ಕೂಡ ಅನುಮಾನ ಪಡಬೇಕಾಗಿಲ್ಲ.

ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ  ಘೋಷಿಸಿರುವ ಲಾಕ್ ಡೌನ್  ಇಲ್ಲಿ ಯಾಕಿಲ್ಲ. ಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಸೋಂಕಿತರ ಸಂಖ್ಯೆ ಅಲ್ಲಿಯೂ ಕೂಡ  ತುಸು ಹೆಚ್ಚೇ ಇದೆ. ಇವನ್ನೆಲ್ಲಾ ಗಮನಿಸುತ್ತಿದ್ದರೆ ಸರ್ಕಾರ ಎಲ್ಲೋ ಒಂದು ಕಡೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದೆನಿಸುತ್ತದೆ. ರಾಜ್ಯಕ್ಕೆ ಅಮೆರಿಕಾ ಇಟಲಿ ಚೀನಾದಂತಹ ಪರಿಸ್ಥಿತಿ ಬಾರದಿರಲಿ. ಈ ಮೇಲಿನ ಅಂಶಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ರಾಜ್ಯ ಸರ್ಕಾರ ಕನಿಷ್ಠ 7 ರಿಂದ 14 ದಿನ ಸಂಪೂರ್ಣವಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸುವುದೇ ಒಳ್ಳೆಯದು ಅಥವಾ ಹೆಚ್ಚು  ಸೋಂಕಿರುವ ಜಿಲ್ಲೆಗಳಲ್ಲಾದರೂ ಲಾಕ್‌ಡೌನ್ ಘೋಷಿಸಲಿ.

ಇದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಸುಲಭವಾಗಿ  ಹರಡುವುದನ್ನು ತಪ್ಪಿಸಬಹುದು ಅಥವಾ ಮುಂದೂಡಬಹುದು ಅಥವಾ ಅದರ ಕೊಂಡಿಯನ್ನೇ ಸಂಪೂರ್ಣವಾಗಿ  ಕತ್ತರಿಸಬಹುದು, ಸರ್ಕಾರ ಬರೀ ಆರ್ಥಿಕತೆಯ ಕಡೆಗೆ ಹೆಚ್ಚು ಒತ್ತು ನೀಡಿದರೆ ಇಡೀ ಕರುನಾಡು ಸ್ಮಶಾನ ಆಗುವುದರಲ್ಲಿ ಅನುಮಾನವಿಲ್ಲ. ಜನರ ಜೀವಕ್ಕಿಂತ ಆರ್ಥಿಕತೆಯೇ ದೊಡ್ಡದಲ್ಲ, ಜನರಿಂದ ಆರ್ಥಿಕತೆಯೇ ಹೊರತು ಆರ್ಥಿಕತೆಯಿಂದ ಜನರಲ್ಲ ಎಂಬುದನ್ನು ಇಲ್ಲಿ ಮನಗಾಣಬೇಕು. ಜನರೇ ಇಲ್ಲದಿದ್ದರೆ ಆರ್ಥಿಕತೆ ಹೇಗೆ ತಾನೆ ಚೇತರಿಸಿಕೊಳ್ಳಲು ಸಾಧ್ಯ. ಈ ಮೂಲಕ ಸರ್ಕಾರ ಇನ್ನೊಮ್ಮೆ ಲಾಕ್ ಡೌನ್  ಕುರಿತು ಚಿಂತಿಸಬೇಕಾಗಿದೆ ಇಲ್ಲದಿದ್ದರೆ ಭವಿಷ್ಯದಲ್ಲಿ ಭಾರೀ ಗಂಡಾಂತರ ಎದುರಿಸುವ  ಪರಿಸ್ಥಿತಿ ಬಂದೆರಗಬಹುದು.

ಡಿ. ಮುರುಗೇಶ್, ದಾವಣಗೆರೆ.
[email protected]

error: Content is protected !!