ಮಾನ್ಯರೇ,
ಮಳೆಗಾಲ ಬಂತೆಂದರೆ ಸಾಕು ಹರಿಹರದ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಕೆರೆ ಉದ್ಭವ ಸಾಮಾನ್ಯ.
ಆಗಾಗ ಅಲ್ಲಲ್ಲಿ ಹೊಲ, ಭೂಮಿಗಳಲ್ಲಿ ಮೂರ್ತಿ ಉದ್ಭವವಾಗುವ ಸುದ್ದಿ ಕೇಳುತ್ತಿರುತ್ತೇವೆ. ಹಾಗೆಯೇ ಹೆದ್ದಾರಿ ನಿರ್ವಹಣಾ ಅಧಿಕಾರಿಗಳೋ ಅಥವಾ ನಗರ ಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಫಲವಾಗಿ ಹರಿಹರ ಜನತೆ ಈ ಮಾರ್ಗವಾಗಿ ಓಡಾಡುವ ವಾಹನಗಳ ಪ್ರಯಾಣಿಕರಿಗೆ ಕೆರೆ ದರ್ಶನ ಸರ್ವೇ ಸಾಮಾನ್ಯವಾಗಿದೆ.
ದ್ವಿಚಕ್ರ ವಾಹನಗಳ ಬವಣೆಯಂತೂ ಹೇಳತೀರದು. ನಗರ ಪಾಲಿಕೆ ಏನಾದರೂ ಈ ಕೆರೆಯನ್ನು ಅಭಿವೃದ್ಧಿ ಪಡಿಸಿ ಮೇಲ್ಸೇತುವೆ ರಚಿಸಿ ನಗರದ ಪ್ರವೇಶ ದ್ವಾರ ಅಂದಗೊಳಿಸುವ ಆಲೋಚನೆ ಇರಬಹುದೇನೋ….
ಹರಿಹರದ ಹಾಲಿ ಶಾಸಕರು, ಮಾಜಿ ಶಾಸಕರುಗಳು ಈ ಭಾಗವಾಗಿ ಅನೇಕ ಬಾರಿ ಓಡಾಡಿದಾಗಲೂ ಅವರ ಗಮನಕ್ಕೆ ಈ ಕೆರೆಯ ಕಲ್ಪನೆ ಬಂದು ಕೆರೆ ಮುಖಾಂತರ ಹರಿಹರ ನಗರದ ಅಂದ ಹೆಚ್ಚಿಸುವ ಪ್ಲಾನ್ ಏನಾದರೂ ಇರಬಹುದೆಂದು ತೋರುತ್ತದೆ. ದ್ವಿಚಕ್ರ, ತ್ರಿಚಕ್ರ ವಾಹನ ಸವಾರರೂ, ಭಾರೀ ಮತ್ತು ಮಧ್ಯಮ ಗಾತ್ರದ ವಾಹನ ಚಾಲಕರು ಹೀಗೆ ಹಾದು ಹೋಗುವಾಗ ಹಿಡಿ ಶಾಪ ಹಾಕದೇ ಹೋಗರು.
– ಡಾ. ಜಿ.ಜೆ. ಮೆಹೆಂದಳೆ, ರಾಷ್ಟ್ರ ಉಪಾಧ್ಯಕ್ಷರು, ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್.