ಓಡುತ್ತಿರುವ ಜಗತ್ತಿಗೆ ಸುಸ್ತಾಯಿತೇ?

ಮಾನ್ಯರೇ,

90ರ ದಶಕದ ನಂತರ ಜಗತ್ತು ಬೆಳೆಯುವ ವೇಗ ಎಷ್ಟಿತ್ತೆಂದರೆ ಯಾರಿಗೂ, ಯಾವುದಕ್ಕೂ ಸಮಯವೇ ಇರಲಿಲ್ಲ. ಎಲ್ಲರೂ ಒಂದು ರೀತಿಯಲ್ಲಿ ಬ್ಯುಸಿ ಜೀವ ನಕ್ಕೆ ಹೊಂದಿಕೊಂಡು ಹೋಗಿದ್ದರು. ಎಷ್ಟರಮಟ್ಟಿಗೆ ಎಂದರೆ ದಿನದ 24 ಗಂಟೆಯೂ ಕಮ್ಮಿ ಆಗುವಂತೆ. ಹೌದು ಪ್ರಪಂಚ ಮುಂದುವರೆಯುತ್ತಾ ಹೋದಂತೆ ಅದಕ್ಕೆ ತಕ್ಕ ಹಾಗೆ ನಾವು ಕೂಡ ಹೊಂದಿಕೊಳ್ಳಲಾರಂ ಭಿಸಿದೆವು. ತಂತ್ರಜ್ಞಾನ ಮತ್ತು ವಿಜ್ಞಾನಗಳು ಬೆಳೆಯುತ್ತಾ ಹೋದಂತೆ ನಮಗೆಲ್ಲ ಜಗತ್ತು ತುಂಬಾ ಚಿಕ್ಕದಾಯಿತು, ಇವತ್ತು ಇಲ್ಲಿ ನಾಳೆ ಪ್ರಪಂಚದ ಇನ್ನಾವುದೋ ಮೂಲೆಯಲ್ಲಿ ನಮ್ಮ ಜೀವನ, ನಾವೇ ಸೃಷ್ಟಿಸಿಕೊಂಡ ಆಧುನಿಕ ಸೌಲಭ್ಯಗಳು ನಮ್ಮನ್ನು ತುಂಬಾ ವೈಭವಯುತವಾದ ಜೀವನ ಮಾಡಲು ಕಲಿಸಿದವು. ಏನೂ ಇಲ್ಲದಿದ್ದರೂ ಸಹ (ಸಂಬಂಧಗಳು ಕೂಡ)ಕೇವಲ ಹಣವೊಂ ದಿದ್ದರೆ ಈ ಜಗತ್ತಿನ ಎಲ್ಲಾ ವೈಭವ ನಮ್ಮ ಕಾಲ ಕೆಳಗೆ ಎನ್ನುವಷ್ಟರ ಮಟ್ಟಿಗೆ ಜಗತ್ತು ಓಡುತ್ತಿತ್ತು. ಆದರೆ ಇಂದು ಯಾಕೋ ಜಗತ್ತಿಗೆ ಸುಸ್ತಾದಂತಿದೆ. ಬಹುಶಃ ಎಲ್ಲಾ ಓಟಕ್ಕೂ ಒಂದು ನಿರ್ದಿಷ್ಟ ಗುರಿ ಇರುತ್ತದೆ ಆದರೆ ಈ ಓಟಕ್ಕೆ  ಒಂದು ಸ್ಪಷ್ಟ ಗುರಿ ಇರಲಿಲ್ಲ. ಅದಕ್ಕೇ ಇರಬೇಕು ಕಣ್ಣಿಗೆ ಕಾಣದ ವೈರಸ್ ಆ ಓಟಕ್ಕೆ ಬ್ರೇಕ್ ಹಾಕಿದೆ.

ಒಂದು ಗಂಟೆಯನ್ನು ವ್ಯರ್ಥ ಮಾಡದ ನಾವು ತಿಂಗಳುಗಟ್ಟಲೆ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಹಣವೊಂದೇ ಜೀವನ ಅನ್ನುವವರಿಗೆ ಅನ್ನ, ಆರೋಗ್ಯ, ಅನ್ಯೋನ್ಯತೆಯ ಬೆಲೆ ತಿಳಿಯುವಂತಾಗಿದೆ. ಎಷ್ಟೇ ಮುಂದುವರೆದರೂ ಯಾವುದೋ ಒಂದು ಶಕ್ತಿ ನಮ್ಮನ್ನು ನಿಯಂತ್ರಿಸುತ್ತಿದೆ ಎಂಬುದು ಸ್ಪಷ್ಟವಾಗಿ ಅರಿವಾಗುತ್ತಿದೆ. ನಿಸರ್ಗದಲ್ಲಿರುವ ಇನ್ನು ಉಳಿದ ಯಾವುದೇ ಸಣ್ಣ ಜೀವಿಗೂ ಯಾವುದೇ ಆತಂಕವಿಲ್ಲ. ಆದರೆ ಮನುಷ್ಯ ಮಾತ್ರ ವೈರಸ್ ನ ಭಯದಿಂದಲೇ ಸಾಯುತ್ತಿದ್ದಾನೆ.

`ಹೊಸ ಸವಾಲೆಸೆವ ಸನ್ನಿವೇಶಗಳು ಸಾಧ್ಯತೆಗಳು ಸಮಸ್ಯೆಗಳಲ್ಲ, ನಿಮ್ಮ ಜೊತೆ ಏನೂ ಹೊಸತು ನಡೆಯದಿದ್ದರೆ ಅದು ಸಮಸ್ಯೆಯೆಂದು’, ದಾರ್ಶನಿಕರು ಹೇಳುತ್ತಾರೆ…… ಹಾಗೆಯೇ ಈ ಕೊರೊನಾ ಬಂದಿರುವುದು ಎಲ್ಲರ ಬಾಳಲ್ಲಿ ಒಳ್ಳೆಯದೋ-ಕೆಟ್ಟದೋ ಏನೋ ಒಂದು ನಡೆಯುತ್ತಿದೆ. ಈ ಆತಂಕದ ವಿಷಯವನ್ನು ನಾವೆಲ್ಲರೂ ಅವಕಾಶವನ್ನಾಗಿ ಬಳಸಿಕೊಳ್ಳಬೇಕಾಗಿದೆ. ಮತ್ತೆ ಈ ಸುಸ್ತಾಗಿರುವ ಜಗತ್ತಿಗೆ ಹೊಸ ಚೈತನ್ಯ ಕೊಡಬೇಕಿದೆ. ಅದಕ್ಕಾಗಿ ನಾವು ನಮ್ಮ ಬದುಕಿನ ಬಗ್ಗೆ ಪಾಸಿಟಿವ್ ಆಗಿ ಯೋಚನೆ ಮಾಡಿ ಕೊರೊನಾ ನಮ್ಮಲ್ಲಿ ನೆಗೆಟಿವ್ ಇರಲಿ ಎಂದು ಪ್ರಾರ್ಥಿಸೋಣ.


– ಪದ್ಮ ರವಿ, ದಾವಣಗೆರೆ.
[email protected]

error: Content is protected !!