ಮಾನ್ಯರೇ,
ಆಯಾ ಜಿಲ್ಲೆಗಳ ಎಲ್ಲಾ ರಾಜಕೀಯ ಪಕ್ಷಗಳ ಹಾಲಿ, ಮಾಜಿ ಎಂ.ಪಿ., ಎಂ.ಎಲ್.ಎ., ಎಂ.ಎಲ್ಸಿ.ಗಳು ಒಟ್ಟಾಗಿ ತಮ್ಮ ಯೋಗ್ಯತಾನುಸಾರ ನಿಗದಿಪಡಿಸಿದ ಬೆಂಬಲ ಬೆಲೆಯಂತೆ ರೈತರಿಂದ ಮೆಕ್ಕೆಜೋಳ ಖರೀದಿಸಿ, ಸರ್ಕಾರಿ ಗೋಡೌನುಗಳಲ್ಲಿ ಸಂಗ್ರಹಿಸಿಕೊಳ್ಳಲಿ ಅಥವಾ ನಂತರ ಖರೀದಿದಾರರಿಗೆ ಶೇ.10 ಅಥವಾ ಶೇ.20 ರಿಯಾಯಿತಿಯಲ್ಲಿ ಮಾರಿಕೊಳ್ಳಲಿ. ಆಗ ಅಂತವರ ಮೇಲೆ ರೈತರಿಗೂ ನಂಬುಗೆ ಮೂಡುತ್ತದೆ. ವ್ಯಾಪಾರಸ್ಥರಿಗೂ ಅನುಕೂಲ ಮಾಡಿದಂತಾಗುತ್ತದೆ. ರೈತರ ಕಷ್ಟವೂ ನೀಗುತ್ತದೆ.
ರೈತರಿಗೆ ಸಾಲ ಮನ್ನಾ, ಬಡ್ಡಿ ಮನ್ನಾ ಮಾಡು ವುದೂ ಇಲ್ಲ, ಬೆಳೆದ ಫಸಲೂ ಕೊಳ್ಳಲ್ಲ ಅಂದ್ರೆ ಅವರು ಏನು ಮಾಡಬೇಕು? ರೈತರು ಈ ಎಲ್ಲಾ ರಾಜಕಾರ ಣಿಗಳ ಪೊಳ್ಳು ಮಾತಿಗೆ ಬಲಿಪಶುವಾಗುವುದು ನಿಲ್ಲುವುದು ಯಾವಾಗ? ಕೊರೊನಾದಿಂದ ಸಾಯುವವರ ಸಂಖ್ಯೆಗಿಂತ ಈ ಅನ್ಯಾಯದಿಂದ ಸಾಯುವವರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಎಲ್ಲಾ ರಾಜಕಾರಣಿಗಳು ಆರಾಮಾಗಿ ಅವರವರ ಮನೆಯಲ್ಲಿ ಹಾಯಾಗಿದ್ದಾರೆ. ರೈತ ತನ್ನ ಹೆಗಲ ಮೇಲಿನ ಬಾರುಕೋಲಿನ ಚಾಟಿಯನ್ನು ಇವರೆಲ್ಲರತ್ತಾ ಬೀಸಬೇಕಿದೆ. ಆದರೆ, ರೈತರಲ್ಲೂ ಸಹ ಬಹುತೇಕರು ಈ ರಾಜಕಾರಣಿಗಳ ಹಿಂದೆ ಅಲೆಯುತ್ತಾ ಗ್ರಾ.ಪಂ., ತಾ.ಪಂ., ಜಿ.ಪಂ. ರಾಜಕಾರಣಿಗಳ ಹಿಂದೆ ಅಡ್ಡಾಡುವ ಅಡ್ನಾಡಿಗಳಾಗಿದ್ದಾರೆ. ಅರಿವು ಹಾಗೂ ಒಗ್ಗಟ್ಟು ಇಲ್ಲದ ಸ್ವಾಭಿಮಾನಿ ಅನ್ನದಾತರನ್ನು ಸಾಲಗಾರರನ್ನಾಗಿಸಿ, ರಣಹೇಡಿಗಳನ್ನಾಗಿ ಮಾಡಲಾಗುತ್ತಿದೆ.
ನಮ್ಮವರೇ ಆದ ಕೃಷಿ ಮಂತ್ರಿ ಬಿ.ಸಿ.ಪಾಟೀಲರು ಏನಾದರೂ ಹೊಸತನವನ್ನು ಈ ನಿಟ್ಟಿನಲ್ಲಿ ತಂದು ದೇಶಕ್ಕೇ ಮಾದರಿಯಾಗಲೆಂದು ಆಶಿಸೋಣವೇ ?!
– ಆರ್.ಶಿವಕುಮಾರಸ್ವಾಮಿ ಕುರ್ಕಿ, ದಾವಣಗೆರೆ