ಮಾನ್ಯರೇ,
ಇಂದು ದೇಶದಾದ್ಯಂತ ಸಾಂಕ್ರಾಮಿಕ ರೋಗದಂತೆ ಆವರಿಸಿಕೊಂಡಿರುವ ಭ್ರಷ್ಟಾಚಾರ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಕಪ್ಪು ಹಣ ಶೇಖರಣೆಗೆ ನಾಂದಿ ಹಾಡಿದೆ. ಎಲ್ಲಾ ಕಡೆ ಭ್ರಷ್ಟಾಚಾರ ನಿತ್ಯ ನೂತನ ಚಿರಚೇತನದಂತೆ ಹರಡಿಕೊಂಡಿದೆ.
ಭಾರತವು ಭ್ರಷ್ಟಾಚಾರದಿಂದ ಮುಕ್ತವಾಗ ಬೇಕಾದರೆ, ಜಾಗೃತ ಆಯೋಗದ ಆಯುಕ್ತರಿಗೆ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲು ಮುಕ್ತ ಅವಕಾಶ ನೀಡಬೇಕು. ಭ್ರಷ್ಟಾಚಾರವು ಭಾರತದ ಸಾರ್ವಜನಿಕ ವಲಯಕ್ಕೆ ಅಂಟಿಕೊಂಡಿರುವ ಕ್ಯಾನ್ಸರ್ನಂತೆ ಇದೆ. ಅದರ ನಿರ್ಮೂಲನಕ್ಕೆ ಈಗ ಬಹುದೊಡ್ಡ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ನಮ್ಮ ದೇಶದ ಹೆಸರು ಭ್ರಷ್ಟಾಚಾರದಲ್ಲಿ ಬಹುದೊಡ್ಡದಾಗಿ ಬೆಳೆದುಕೊಂಡಿದೆ.
ಈಗ ನಮ್ಮ ದೇಶ ಹಾಗೂ ನಮ್ಮ ಜನರು ಒಳ್ಳೆಯ ಪ್ರಗತಿಗೆ ಬರಬೇಕಾದರೆ ಭ್ರಷ್ಟಾಚಾರ ನಿವಾರಣೆಗೊಳ್ಳಬೇಕು. ಇಲ್ಲದಿದ್ದರೆ ದೇಶವು ಅಭಿವೃದ್ಧಿ ಪಡೆಯುವುದು ಹಾಗೂ ನಮ್ಮ ಜನರು ಒಳ್ಳೆಯ ಗತಿಗೆ ಹೋಗಿ ಹತ್ತುವುದು ಸಾಧ್ಯವೇ ಇಲ್ಲ. ನಮ್ಮ ಯೋಜನೆಗಳ ಬಹಳಷ್ಟು ಹಣವನ್ನು ಈ ಭ್ರಷ್ಟಾಚಾರವೇ ತಿಂದು ಹಾಕುತ್ತದೆ. ನಮ್ಮ ದೇಶ ಭ್ರಷ್ಟಾಚಾರದಲ್ಲಿ ಪ್ರಗತಿ ಹೊಂದಿದೆಯೇ ವಿನಃ ಅಭಿವೃದ್ಧಿಯಲ್ಲಿ ದೇಶ ಡೋಲಾಯಮಾನ ಪರಿಸ್ಥಿತಿಗೆ ಬಂದು ನಿಂತಿದೆ.
ಕಪ್ಪು ಹಣ ಶೇಖರಣೆಯಲ್ಲಿ ನಮ್ಮ ದೇಶ ನಂಬರ್ ಒನ್ ಆಗಿದೆ. ಸ್ವಾರ್ಥ, ಭ್ರಷ್ಟ ರಾಜಕಾರಣಿಗಳ, ಅಧಿಕಾರಿಗಳ ಹಿಡಿತದಲ್ಲಿ ಇಂದಿನ ಆಡಳಿತ ಕಾರ್ಯವೈಖರಿ, ದೇಶದ ಸಂಪತ್ತನ್ನು ನುಂಗಿ ನೀರು ಕುಡಿದು, ಭ್ರಷ್ಟಾಚಾರವನ್ನು ಉತ್ತುಂಗದ ಹಾದಿಯಲ್ಲಿ ತಂದು ನಿಲ್ಲಿಸಿದೆ. ದೇಶದಲ್ಲಿ ಇರುವ ಕಪ್ಪು ಹಣವು ನಮ್ಮ ಬ್ಯಾಂಕುಗಳಲ್ಲಿ ಇರುವುದಕ್ಕಿಂತ ವಿದೇಶಿ ಬ್ಯಾಂಕುಗಳಲ್ಲೇ ಅಧಿಕವಾಗಿದೆ. ಆದರೆ ಆ ಕಪ್ಪು ಹಣದ ಅಂದಾಜನ್ನು ಕಡಿಮೆ ಮಾಡಿ ಹೇಳಲಾಗುತ್ತಿದೆ. ಈ ಅಂಕಿ ಸಂಖ್ಯೆಗಳನ್ನು ಸಿದ್ದಪಡಿಸುವವರು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳೇ ಆಗಿದ್ದಾರೆ. ಇದಕ್ಕೆ ಕಡಿವಾಣ ಯಾವಾಗ?
ನಮ್ಮ ದೇಶದ ರಾಜಕಾರಣಿಗಳು, ಮಂತ್ರಿ ಗಳು, ಉನ್ನತ ಅಧಿಕಾರ ಪಡೆದಿರುವ ದೊಡ್ಡ ವ್ಯಕ್ತಿಗಳ ಜೀವನ ಶೈಲಿಯನ್ನು ನೋಡಿದರೆ ಅವರು ಎಂತಹ ಶ್ರೀಮಂತ ಜೀವನವನ್ನು ಬದುಕುತ್ತಿರು ವುದನ್ನು ಕಾಣುತ್ತೇವೆ; ತಾವು ಬೆವರು ಸುರಿಸಿ ದುಡಿಯದ ಹಣ ಅದರಲ್ಲಿ ಒಟ್ಟುಗೂಡಿ ಬಿದ್ದಿರು ತ್ತದೆ. ಅವರು ಅನೇಕ ಮನೆ, ಆಸ್ತಿ ಮಾಡಿ ತಮ್ಮವರ ಉದ್ಧಾರ ಮಾಡಿ, ವಿದೇಶಿ ಬ್ಯಾಂಕ್ಗಳಲ್ಲಿ ತಮ್ಮ ಹಣವನ್ನು ಶೇಖರಿಸಿ ಮೆರೆಯುತ್ತಿದ್ದಾರೆ. ಇಂಥವರಿಗೆ ಕಡಿವಾಣ ಯಾವಾಗ?
ಈ ಹಣ ಎಲ್ಲಿಂದ ಬಂತು ಎಂದು ಕೇಳಿದರೆ, ಹೇಳಲು ಅವರ ಬಳಿ ಸೂಕ್ತವಾದ ಉತ್ತರವೇನು ಇರುವುದಿಲ್ಲ. ಅವರು ಇನ್ನೊಬ್ಬರ ಬೆವರಿನ ಮೇಲೆ ಬದುಕಬೇಕೆನ್ನುತ್ತಾರೆ. ಕಪ್ಪು ಹಣ ಇರಿಸಿಕೊಂಡವರೇ ನಿಗ್ರಹಿಸುವ ಕಾರ್ಯಕ್ಕೆ ಕೈ ಹಾಕಲಾರರು. ತಾವು ನಿಂತ ಮರದ ಟೊಂಗೆಯನ್ನು ಕಡಿಯಲು ಯಾರೂ ಮುಂದಾಗುವುದಿಲ್ಲ.
ಈ ಭ್ರಷ್ಟಾಚಾರದಿಂದ ಬಿಡುಗಡೆ ಹೊಂದಿದರೆ ಭಾರತ ಬದುಕುವುದೂ ಇಲ್ಲ, ಬೆಳೆಯುವುದೂ ಇಲ್ಲ. ಭ್ರಷ್ಟಾಚಾರವನ್ನು ನಿವಾರಿಸಲು ಜಾಗೃತ ಆಯುಕ್ತರು ಮುಂದಾದರೆ ಅವರನ್ನು ಶಾಲು ಹಿಡಿದು ಜಗ್ಗುವವರು ಆಡಳಿತ ಪಕ್ಷದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಲಂಚಗುಳಿತನ ನಿವಾರಣೆ ಬಗ್ಗೆ ಭಾರೀ ಮಾತನಾಡುತ್ತಿದ್ದ ದಕ್ಷ ರಾಜಕಾರಣಿಗಳು, ಅಧಿಕಾರಿಗಳು ಈಗ ತಮ್ಮ ಧ್ವನಿಯನ್ನು ಕೆಳಗಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಸತ್ಯ, ಪ್ರಾಮಾಣಿಕ, ದಕ್ಷ ವ್ಯಕ್ತಿಗಳು ದೇಶದ ಆಡಳಿತ ಚುಕ್ಕಾಣಿ ಹಿಡಿದು ಪ್ರಬಲ, ಕಠಿಣ ಕಾನೂನು ನಿಯಮಗಳನ್ನು ಜಾರಿಗೆ ತಂದರೆ ಮಾತ್ರ ಭ್ರಷ್ಟಾಚಾರದ ಸ್ವಲ್ಪ ನಿಯಂತ್ರಣಕ್ಕೆ ಸಾಧ್ಯತೆಯಿದೆ. ಭ್ರಷ್ಟಾಚಾರದ ವಿಷಯದಲ್ಲಿ ದೇಶದಲ್ಲಿ ಯಾರಿಗೂ ವಿನಾಯಿತಿ ನೀಡಬಾರದು. ಭ್ರಷ್ಟರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಅಧಿಕಾರಿ ವರ್ಗಕ್ಕೆ ಬೆನ್ನು ತಟ್ಟಿ ತಮ್ಮ ಕೆಲಸವನ್ನು ಮುಂದುವರೆಸಿ ಎಂದು ಹೇಳಬೇಕು. ಈ ನಿಟ್ಟಿನಲ್ಲಿ ಯುವ ಜನತೆ ಚಿಂತನೆ ನಡೆಸುವ ಅವಶ್ಯಕತೆ ತುರ್ತಾಗಿ ನಮ್ಮ ದೇಶಕ್ಕಿದೆ.
– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ.