ಮಾನ್ಯರೇ,
ಲಾಕ್‌ಡೌನ್ ಸಂದರ್ಭದಲ್ಲಿ ಕಳೆದುಕೊಂಡಿದ್ದರ ಜೊತೆಗೆ ಗಳಿಸಿದ್ದೇನು, ಉಳಿಸಿದ್ದೇನು ? ಎಂಬ ಲೇಖನ ಮಾಲೆಯಲ್ಲಿ `ಉತ್ತಮ ಗಾಳಿ’ ಗಳಿಸಿದ ಬಗ್ಗೆ, ಶಬ್ದ ಮಾಲಿನ್ಯ ಇಳಿಸಿದ ಬಗ್ಗೆ, ಆಹಾರ ವ್ಯರ್ಥ ಕಡಿಮೆಯಾದ ಬಗ್ಗೆ ಬರೆದಿದ್ದೆ. ಇದೀಗ ಈ ಲೇಖನ ಮಾಲೆಯ ಕೊನೆಯ ಕಂತಾಗಿ ಪೆಟ್ರೋಲಿಯಂ ತೈಲ ಉಳಿತಾಯವಾದ ಬಗ್ಗೆ ಬರೆದಿರುವೆ.
ಅನಾದಿ ಕಾಲದಿಂದಲೂ ಮಾನವರಿಗೆ ವಾಹನವೆಂದರೆ ಕುದುರೆ, ಒಂಟೆ, ಆನೆ, ಕತ್ತೆ ಸವಾರಿ ಅಥವಾ ಇವೇ ಪ್ರಾಣಿಗಳಿಂದ ಎಳೆಯಲ್ಪಡುವ ಬಂಡಿ, ಎತ್ತಿನಗಾಡಿ ಮುಂತಾದವಾಗಿದ್ದವು. ಪೆಟ್ರೋಲಿಯಂ ಇಂಧನ ಬಳಸಿ, ಚಲಿಸುವ ಮೋಟಾರು ಬಂದ ಮೇಲೆ ಜಗತ್ತೇ ಚಿಕ್ಕದೆಂಬಂತೆ ಭಾಸವಾಯಿತು. ಈಗಂತೂ ಮೋಟಾರು ವಾಹನಗಳಿಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ನಮ್ಮ ದೇಶದಲ್ಲಿ ಪೆಟ್ರೋಲಿಯಂ ತೈಲ ಇಂಧನವಾಗಿ ಬಳಸಿ, ಚಲಿಸುವ ಮೋಟಾರು ವಾಹನಗಳ ಸಂಖ್ಯೆ ಸುಮಾರು 26 ಕೋಟಿಯಷ್ಟಿದ್ದು, ಇದರಲ್ಲಿ ಶೇ.76 ರಷ್ಟು ದ್ವಿಚಕ್ರ ವಾಹನಗಳೇ ಇವೆ. ದೇಶದಲ್ಲಿ ತೈಲ ಬಳಕೆ ವಾರ್ಷಿಕ ಸುಮಾರು 190 ಕೋಟಿ ಬ್ಯಾರಲ್‌ಗಳಷ್ಟಿದೆ ! ಒಂದು ಬ್ಯಾರಲ್ ಅಂದರೆ ಸುಮಾರು 159 ಲೀಟರ್. ದೇಶದಲ್ಲಿ ಪ್ರತಿದಿನ ಸರಾಸರಿ ಸುಮಾರು 52 ಲಕ್ಷ ಬ್ಯಾರಲ್ ತೈಲ ಬಳಕೆಯಾಗುತ್ತಿದೆ. ಅಂದರೆ ಪ್ರತಿನಿತ್ಯ ಸುಮಾರು 83 ಕೋಟಿ ಲೀಟರ್‌ನಷ್ಟು.
ಪೆಟ್ರೋಲಿಯಂ ತೈಲವನ್ನು ವಾಹನಗಳಿಗಾಗಿ ಬಳಸಲಾಗುತ್ತಿದ್ದು, ನಿತ್ಯ ಇಷ್ಟೊಂದು ಪ್ರಮಾಣದ ಅತ್ಯಂತ ಅಪಾಯಕಾರಿ ನೈಟ್ರೋಜನ್ ಆಕ್ಸೈಡ್ ವಿಷಾನಿಲ ವಾತಾವರಣವನ್ನು ಸೇರುತ್ತಿದ್ದು, ನಿತ್ಯ ಈ ವಿಷಾನಿಲವು ಜೀವಿಗಳ ಶ್ವಾಸಕೋಶ ಸೇರುತ್ತಿದೆ!
ರಸ್ತೆ ಅಪಘಾತಗಳಲ್ಲಿ ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ಮಂದಿ ಸಾವನ್ನಪ್ಪುತ್ತಿದ್ದು, ದಿನವೊಂದಕ್ಕೆ ಸರಾಸರಿ 410 ಮಂದಿ ರಸ್ತೆ ಅಪಘಾತಗಳಿಂದಾಗಿ ಸಾವು ಕಾಣುತ್ತಿದ್ದಾರೆ!
ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಮೋಟಾರು ವಾಹನಗಳ ಓಡಾಟ ಸಂಪೂರ್ಣ ಸ್ತಬ್ಧವಾಗದಿ ದ್ದರೂ ಹೆಚ್ಚಿನ ಪ್ರಮಾಣದಲ್ಲಿ ಸ್ತಬ್ಧವಾಗಿದ್ದ ಕಾರಣ ಪೆಟ್ರೋಲಿಯಂ ತೈಲ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಯಿತು.
ಅದಕ್ಕಾಗಿ ಅದನ್ನು ತೈಲ ರಾಷ್ಟ್ರಗಳಿಂದ ಖರೀದಿಸಲು ನಾವು ಕೊಡಬೇಕಾದ ವಿದೇಶಿ ವಿನಿಮಯ ಉಳಿತಾಯವಾಯಿತು. ದೊಡ್ಡ ಪ್ರಮಾಣದ ವಿಷಾನಿಲ ನೈಟ್ರೋಜನ್ ಆಕ್ಸೈಡ್ ವಾತಾವರಣ ಸೇರಿ ನಮ್ಮ ಆರೋಗ್ಯ ಕೆಡುವುದು ತಪ್ಪಿತು. ಅದೇ ಪ್ರಮಾಣದ ಶಬ್ದ ಮಾಲಿನ್ಯ ತಪ್ಪಿತು. ಅಷ್ಟೇ ಅಲ್ಲ ಮೋಟಾರು ವಾಹನಗಳ ಓಡಾಟದಲ್ಲಾಗುತ್ತಿದ್ದ ರಸ್ತೆ ಅಪಘಾತದ ಸಾವಿನ ಪ್ರಮಾಣವೂ ಲಾಕ್‌ಡೌನ್ ಸಮಯದಲ್ಲಿ ತುಂಬಾ ಕಡಿಮೆಯಾಯಿತು.
ಅಂದಾಕ್ಷಣ ಲಾಕ್‌ಡೌನ್ ಶಾಶ್ವತವಾಗಿರಬೇಕು, ಮೋಟಾರು ವಾಹನಗಳು ಓಡಾಡಲೇಬಾರದು ಎಂಬುದು ನನ್ನ ಅಭಿಪ್ರಾಯವಲ್ಲ. ಹೀಗಾದರೆ ವ್ಯಾಪಾರ, ಉದ್ಯಮ, ಜನ ಜೀವನ, ಆರ್ಥಿಕತೆ ಎಲ್ಲದಕ್ಕೂ ಕುಂದು ಶತಸಿದ್ಧ. ಲಾಕ್‌ಡೌನ್ ಸಂದರ್ಭದಲ್ಲಿ ಏನೆಲ್ಲಾ ಕಳೆದುಕೊಂಡೆವು ನಿಜ. ಅದನ್ನೇ ಚಿಂತಿಸಿ, ಧೃತಿಗೆಡುವುದಕ್ಕಿಂತ ಕಳೆದುಕೊಂಡಿದ್ದರ ಜೊತೆ ಜೊತೆಗೆ ಗಳಿಸಿದ್ದೇನು, ಉಳಿಸಿದ್ದೇನು? ಎಂಬುದನ್ನು ಸಕಾರಾತ್ಮಕವಾಗಿ ಲೆಕ್ಕ ಹಾಕಿ ನೋಡಿದಾಗ, ತುಸು ಸಮಾಧಾನವಾದೀತು.
– ಹೆಚ್.ಬಿ.ಮಂಜುನಾಥ್, ಹಿರಿಯ ಪತ್ರಕರ್ತ.