ನ್ಯಾಯಬೆಲೆ ಅಂಗಡಿಯಲ್ಲಿ ಕೊರೊನಾ ಆತಂಕ

ಮಾನ್ಯರೇ,

ಕೊರೊನಾ ಸಂಬಂಧವಾದ ಲಾಕ್ ಡೌನ್ ನಿಂದ ಹಸಿವಿನಿಂದ ಯಾರೂ ಬಳಲಬಾರದೆಂದು ಕರ್ನಾಟಕ ಸರ್ಕಾರ ಎರಡು ತಿಂಗಳ ಪಡಿತರ ನೀಡುತ್ತಿದೆ, ಉತ್ತಮ ಕಾರ್ಯ. 

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಮತ್ತು ಆಯುಕ್ತರ ಗಮನಕ್ಕೆ ಒಂದಿಷ್ಟು ವಿಷಯಗಳು.  

1. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ಇರುವುದನ್ನು ತೆಗೆದು ಆಧಾರ್ ಕಾರ್ಡ್ ಜೋಡಿತ ಮೊಬೈಲ್ ಒಟಿಪಿ(ಒನ್ ಟೈಮ್ ಪಾಸ್ ವರ್ಡ್) ಯನ್ನು ಪಡಿತರ ಪಡೆಯಲು ಅವಕಾಶ ನೀಡಿದ್ದೀರಿ. ಆದರೆ, ಸರ್ವರ್ ಬ್ಯುಸಿ ಇರುವುದರಿಂದ ಪಡಿತರ ವಿತರಣೆ ತಡವಾಗುತ್ತಿದೆ. ಪರಿಣಾಮ ಬಯೋಮೆಟ್ರಿಕ್ ವ್ಯವಸ್ಥೆಯನ್ನೇ ಮತ್ತೆ ಬಳಸಲಾಗುತ್ತಿದೆ. ಇದು ಕೊರೊನಾ ಹರಡಲು ಪ್ರಮುಖ ಕಾರಣವಾಗಬಹುದು. (ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡಬೇಕಾದ ತುರ್ತು ಅಗತ್ಯವಿದೆ. ಇಲ್ಲವಾದರೆ ನ್ಯಾಯಬೆಲೆ ಪಡಿತರ ಫಲಾನುಭವಿಯಿಂದ ಸರಬರಾಜುದಾರರಿಗೆ ಮತ್ತು ಅವರಿಂದ ಎಲ್ಲರಿಗೂ ಹರಡುವ ಅಪಾಯವಿದೆ )

2. ಬಯೋಮೆಟ್ರಿಕ್ ಮತ್ತು ಓಟಿಪಿ ಗಳನ್ನು ಸದ್ಯಕ್ಕೆ ಬಿಟ್ಟು ಹಳೆಯ ರೀತಿಯಲ್ಲೇ ದಾಖಲೆಯನ್ನು ಕಾಪಿಡಲು ಆದೇಶಿಸಬೇಕು. 

3. ಪಡಿತರ ಪಡೆಯಲು ಸರತಿಯಲ್ಲಿ ಜನರು ನಿಂತಿರುವಾಗ ಪೊಲೀಸ್ ನಿಯೋಜಿಸಿ ಸಾಮಾಜಿಕ ಅಂತರವನ್ನು ಕಾಪಾಡಲು ಆದೇಶಿಸಬೇಕಿದೆ.

4. ಪಡಿತರ ಚೀಟಿ ಇಲ್ಲದವರಿಗೂ ಪಡಿತರ ನೀಡಲಾಗುವುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಅದು ಎಪಿಎಲ್ ಕಾರ್ಡ್ ದಾರರಿಗೋ ಅಥವಾ ಯಾವ ಕಾರ್ಡ್ ಕೂಡಾ ಇಲ್ಲದವರಿಗೋ ಎನ್ನುವುದು ಸ್ಪಷ್ಟವಾಗಿಲ್ಲ. ಜೊತೆಗೆ ನ್ಯಾಯಬೆಲೆ ಅಂಗಡಿಗಳಿಗೆ ಯಾವುದೇ ಆದೇಶ ತಲುಪಿಲ್ಲ ಎಂದು ಹೇಳುತ್ತಿರುವುದರಿಂದ ಇದರ ಬಗ್ಗೆ ಸ್ಪಷ್ಟಪಡಿಸಬೇಕಿದೆ. 

5. ಎರಡು ತಿಂಗಳ ಪಡಿತರವನ್ನು ಒಮ್ಮೆಗೇ ಕೊಡುತ್ತಿರುವುದರಿಂದ ಹೆಚ್ಚಿನ ಮಾನವ ಸಂಪನ್ಮೂಲ ಅಗತ್ಯವಿದೆ. ಈಗಿರುವ ಮಾನವ ಸಂಪನ್ಮೂಲವನ್ನೇ ಬಳಸಿದರೆ ಉದ್ದದ ಸಾಲುಗಳು ಮತ್ತು ಸಾಮಾಜಿಕ ಅಂತರ ಕಡಿಮೆ ಆಗುವುದರಿಂದ ಕೊರೊನಾ ಆತಂಕ ಹೆಚ್ಚಾಗುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚಿನ ಜನರನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕಿದೆ. 

– ಪ್ರೊ. ಗಣೇಶ್ ಕೆ. ದಾವಣಗೆರೆ.

error: Content is protected !!