ಮಾನ್ಯರೇ,
ವಿಶ್ವದ ಬಹುತೇಕ ರಾಷ್ಟ್ರಗಳ ಜನಜೀವನ ಅಸ್ತವ್ಯಸ್ತ, ಹಡಗು-ವಿಮಾನ-ರೈಲು-ಬಸ್-ಲಾರಿ ರಸ್ತೆ ಸಂಚಾರ ಅರೆಕ್ಷಣದಲ್ಲಿ ಸ್ತಬ್ದ, ಬಹು ದೂರದ ಆಕಾಶದ ಮೇಲೆ ತೂಗಾಡುತ್ತಿರುವ ಉಪಗ್ರಹಗಳ ಸಹಾಯ ದಿಂದ ನಾವು ದೇಶ-ವಿದೇಶಗಳ ನಗರ, ಪಟ್ಟಣಗಳಲ್ಲಿರುವ ನಮ್ಮವರನ್ನು ನೋಡಿ ಮಾತಾಡಿ, ಮನಕ್ಕೆ ನೆಮ್ಮದಿ ಮಾಡಿಕೊಳ್ಳುತ್ತಿದ್ದೇವೆ. ಇವು ಇಲ್ಲದೆ ಹೋಗಿದ್ದರೆ ನಾವು 18ನೇ ಶತಮಾನಕ್ಕೆ ವಾಪಸ್ ಹೋಗುತ್ತಿದ್ದೆವು.
ಯಾಕೆ ಹೀಗೆ ನಾವು ಎಷ್ಟೇ ಸವಲತ್ತು ಇದ್ದರೂ ಅಸಹಾಯಕರಾಗಿ ಕೂತಿದ್ದೇವೆ. ಇದಕ್ಕೆ ಯಾರು ಹೊಣೆ? ಯಾರಿಂದ, ಯಾರಿಗೆ, ಯಾಕಾಗಿ ಬಂತು ಮೈ ನಡುಗಿಸುವ, ಕಣ್ಣಿಗೆ ಕಾಣದ ವೈರಾಣುವಿನಿಂದ ಸಾವಿರಾರು ಜನರ ಮರಣ, ಲಕ್ಷಾಂತರ ಜನರಿಗೆ ಸೋಂಕು ತಂದಿರುವ ಆ ವಿಲಕ್ಷಣ ವಿಕಾರಿ ವೈರಾಣು.
ನಮ್ಮ ರಾಷ್ಟ್ರದ 130 ಕೋಟಿಗೂ ಹೆಚ್ಚು ಜನರ ಜೀವನ ಸುಖ, ದುಃಖ, ವ್ಯಾಪಾರ, ವ್ಯವಹಾರ, ಬದುಕು ಇವುಗಳ ಬಗ್ಗೆ ನಮ್ಮನ್ನಾಳುವ ಸರ್ಕಾರದ ಅಧಿಕಾರಿಗಳು, ಪೊಲೀಸ್ ಇಲಾಖೆ, ಡಾಕ್ಟರ್, ನರ್ಸ್‌ಗಳು, ಔಷಧಿ ಅಂಗಡಿಯವರು, ದಿನಸಿ ಅಂಗಡಿ, ತರಕಾರಿ ಮಾರುವವರು ಇವರೆಲ್ಲರೂ ತಮ್ಮ ಮನದಾಳದಿಂದ ತಮ್ಮ ಜೀವವನ್ನು ಒತ್ತೆ ಇಟ್ಟು ನಮ್ಮೆಲ್ಲ ನಾಗರಿಕ ಬಂಧುಗಳಿಗೆ ತಮ್ಮ ಮನೆ ಮಕ್ಕಳಂತೆ ಸಂರಕ್ಷಿಸಲು ಈ ವೈರಾಣುವಿನ ವಿರುದ್ಧ ಹೋರಾಡುತ್ತಿರುವ ಈ ಮಹನೀಯರು ಹಾಗೂ ಸುಮಾರು 15 ದಿನಗಳಿಂದ ಮನೆ ಮಂದಿಗೆ ಬೇಸರವಾಗದೆ ಹಗಲಿರುಳು ಬಿಸಿ ಬಿಸಿ ಅಡುಗೆ ಮಾಡಿ ಬಡಿಸುತ್ತಿರುವ ಅನ್ನಪೂರ್ಣೇಶ್ವರಿ ಸ್ವರೂಪಿ ಮಾತೆಯರಿಗೆ ಶತ-ಶತ ಕೋಟಿ ನಮಸ್ಕಾರಗಳು. ಕಾಣದ ದೇವರು ಮರೆ ತಿರುವಾಗ, ಕಾಣುವ ದೇವರುಗಳಾದ ಇವರೆಲ್ಲರಿಗೂ ಧನ್ಯವಾದಗಳು.
– ಟಿ.ಜೆ. ಸುರೇಶ್