ಮದ್ಯ, ತಂಬಾಕು ಮತ್ತು ಮಾದಕ ವಸ್ತುಗಳ ಮುಕ್ತ ರಾಜ್ಯವಾಗಿಸಿ

ಮಾನ್ಯರೇ,

ಜನರ ಆರೋಗ್ಯ ದೃಷ್ಠಿಯಿಂದ ಲಾಕ್‌ಡೌನ್ ಸಂದರ್ಭದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡುವ ಮಹತ್ವದ ನಿರ್ಣಯ ಇಂದು ಲಕ್ಷ ಲಕ್ಷ ಕುಟುಂಬಗಳಿಗೆ ನೆಮ್ಮದಿ ತಂದಿದ್ದು, ಆರ್ಥಿಕ  ಉಳಿತಾಯ ಹಾಗೂ ಆರೋಗ್ಯ ಸುಧಾರಣೆಯಾಗಲು ಸಹಕಾರಿಯಾಗಿದೆ.

ಈಗಾಗಲೇ ತಾತ್ಕಾಲಿಕ ಮದ್ಯ ನಿಷೇಧದಿಂದ ಲಕ್ಷಾನುಗಟ್ಟಲೇ ಮದ್ಯ ವ್ಯಸನಿಗಳು ಚಟ ಮುಕ್ತರಾಗುತ್ತಿದ್ದಾರೆ. ಮುಖ್ಯಮಂತ್ರಿಗಳು ಸಂಪೂರ್ಣ ಮದ್ಯ ನಿಷೇಧ ಮಾಡಿದರೆ ನಾಡಿನ ಜನತೆಯ ಆರೋಗ್ಯ ಕಾಪಾಡಿದಂತಾಗುತ್ತದೆ.

ಡಿಡಿಟಿ (ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ) ಮುದುಕರಿಗೆ, ಯುವಕರಿಗೆ, ಮಹಿಳೆಯರಿಗೆ, ಸಮಾಜಕ್ಕೆ ವಿಷವಿದ್ದಂತೆ. ನೀರಿನಲ್ಲಿ ಮುಳುಗಿ ಸತ್ತಿದ್ದಕ್ಕಿಂತ ಈ ಮದಿರಾ ಗ್ಲಾಸ್‌ನಲ್ಲಿ ಮುಳುಗಿ ಸತ್ತವರೇ ಹೆಚ್ಚು. ಕ್ಷಣಿಕ ಸುಖ, ಅಪಾರ ದುಃಖಕ್ಕೆ ಕಾರಣವಾಗುತ್ತದೆ. ಒಂದು ದೇಶವನ್ನು ನಿರ್ನಾಮ ಮಾಡಲು ಡಿಡಿಟಿ ಸಾಕು. ಯಾವುದೇ ಶತ್ರು ದೇಶ, ನ್ಯೂಕ್ಲಿಯರ್ ಬಾಂಬ್‌ಗಳು ಬೇಕಿಲ್ಲ. ಇವೆಲ್ಲವನ್ನೂ ಮನಗಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ನಮ್ಮ ಮನವಿ.

ಸಮಾಜದ ದುರ್ವ್ಯಸನಿಗಳ ಚಟ ಬಿಡಿಸುವಲ್ಲಿ ಮಠಾಧೀಶರು, ಮಡದಿ, ಮಕ್ಕಳು, ಮೇಷ್ಟ್ರು ಇವರ ಪಾತ್ರ ಅಪಾರವಾಗಿರುತ್ತದೆ. ಇವರೂ ಸಹ ಸಹಕರಿಸಬೇಕಾಗಿ ವಿನಂತಿ. ನಾವೆಲ್ಲರೂ ಕರ್ನಾಟಕವನ್ನು ದುರ್ವ್ಯಸನ ಮುಕ್ತ ರಾಜ್ಯವನ್ನಾಗಿಸಿ, ಮಾದರಿ ರಾಜ್ಯವನ್ನಾಗಿಸೋಣ.

– ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.

error: Content is protected !!