ಮನೆ ಕಂದಾಯ ಕಟ್ಟೋಣ…ಕೊರೊನಾ ಮರೆಯೋಣ

ಮಾನ್ಯರೇ, 

ಮಾರ್ಚ್ ತಿಂಗಳ ಆರಂಭದಲ್ಲಿ ಮಹಾನಗರಪಾಲಿಕೆಯವರು ಮನೆಯ ಹಾಗೂ ನೀರಿನ ಕಂದಾಯವನ್ನು ವಿನೋಬನಗರದ 2ನೇ ಮೇನ್,  ಗಣೇಶ ದೇವಸ್ಥಾನದ ಆವರಣದಲ್ಲಿ ಕಟ್ಟಿಸಿಕೊಳ್ಳುವುದನ್ನು ಗಮನಿಸಿದ್ದೆ.

ಏಪ್ರಿಲ್‌ನಲ್ಲಿ ಮನೆಯ ಕಂದಾಯ ಕಟ್ಟಿದರೆ ಕಂದಾಯದಲ್ಲಿ ಶೇ.5 ರಿಯಾಯಿತಿ ಪಡೆಯಲು ಮುಂದಾಗುತ್ತಿದ್ದರು. ಆದರೆ ಕೊರೊನಾ ಸೋಂಕು ಎಲ್ಲೆಡೆಯೂ ಹರಡುತ್ತಿದ್ದಂತೆ… ಲಾಕ್ ಡೌನ್ ಆಗುತ್ತಿದ್ದಂತೆ… ನಾಗರಿಕರು ಗೃಹಬಂಧನದಲ್ಲಿದ್ದುದರಿಂದ ಏಪ್ರಿಲ್‌ ನಲ್ಲಿ ಮನೆಯ ಕಂದಾಯವಾಗಲೀ, ನೀರಿನ ಕಂದಾಯವಾಗಲೀ ಕಟ್ಟಲು ಮಹಾನಗರಪಾಲಿಕೆಯ ಕಚೇರಿಗೆ ಹೋಗಲಾಗಲಿಲ್ಲ.  ಪಾಲಿಕೆಯ ಪೌರ ಕಾರ್ಮಿಕರಿಗೆ ವೇತನ ಕೊಡಲು ಹಣವಿಲ್ಲ, ಇಂದಿನ ಜನತಾವಾಣಿಯಲ್ಲಿ ಓದಿ ಬೇಸರವಾಯ್ತು. ಕೊರೊನಾ ಎಂಬ ಈ ಮಹಾಮಾರಿ ಕ್ಷೀಣಿಸುವಂತೆ ಕಾಣದಿರುವುದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇಟ್ಟುಕೊಳ್ಳುವುದರೊಂದಿಗೆ ಕೊರೊನಾದೊಂದಿಗೆ ಅಂತರ ಕಾಯ್ದುಕೊಂಡು ಜೀವನವನ್ನು ಸಾಗಿಸಬೇಕಾದ ಅನಿವಾರ್ಯತೆ ನಮ್ಮದಾಗಿದೆ.  ಈ ದೆಸೆಯಲ್ಲಿ ಮಹಾನಗರಪಾಲಿಕೆಯವರು ಆಯಾ ವಾರ್ಡ್‌ಗಳಿಗೆ (ಕಂಟೈನ್ ಮೆಂಟ್ ಜೋನ್ ಹೊರತುಪಡಿಸಿ) ಬಂದು ನಿಶ್ಚಿತ ಸ್ಥಳದಲ್ಲಿ ಮನೆಯ ( ಶೇ.5ರಷ್ಟು ರಿಯಾಯಿತಿ ನೀಡಿ)  ಹಾಗೂ ನೀರಿನ ಕಂದಾಯವನ್ನು ಕಟ್ಟಿಸಿಕೊಳ್ಳುವ ವ್ಯವಸ್ಥೆ ಮಾಡಿದರೆ ಸೂಕ್ತ. ಇದರಿಂದ ನಾಗರಿಕರು ನಗರಪಾಲಿಕೆಗೆ ಬರುವುದನ್ನು ಹಾಗೂ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಬಹುದು.

– ರಘುನಾಥರಾವ್ ತಾಪ್ಸೆ,  ದಾವಣಗೆರೆ

error: Content is protected !!