ಮಾನ್ಯರೇ,
ಕೊರೊನಾದಿಂದ ಜನ ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ತತ್ತರಿಸಿರುವ ಈ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯವರು ಗ್ರಾಹಕರಿಗೆ ಯದ್ವಾತದ್ವಾ ವಿದ್ಯುತ್ ಶುಲ್ಕದ ಬಿಲ್ ನೀಡಿ ಶಾಕ್ ಕೊಟ್ಟಿದ್ದಾರೆ. ಪ್ರತಿ ತಿಂಗಳು ಬರುತ್ತಿದ್ದ ಕರೆಂಟ್ ಬಿಲ್‌ಗಿಂತ 4 ರಿಂದ 5 ಪಟ್ಟು ಹೆಚ್ಚಿಗೆ ಶುಲ್ಕ ಹಾಕಿ ಬಿಲ್ ನೀಡಿರುತ್ತಾರೆ.
ಆಫೀಸ್‌ನಲ್ಲಿ ವಿಚಾರಿಸಿದರೆ ಮಾರ್ಚ್ ಮತ್ತು ಏಪ್ರಿಲ್ ಎರಡು ತಿಂಗಳುಗಳ ಯೂನಿಟ್‌ಗಳನ್ನು ಒಟ್ಟಿಗೆ ಸೇರಿಸಿ ಸ್ಲ್ಯಾಬ್ ನಿಗದಿಪಡಿಸಿದ್ದೇವೆ ಎಂಬ ಅವೈಜ್ಞಾನಿಕ ಉತ್ತರ ನೀಡುತ್ತಾರೆ. ಲಾಕ್‌ಡೌನ್‌ನಲ್ಲಿ ಎ.ಸಿ., ಫ್ಯಾನ್ ಬಳಸಿದ್ದೀರಿ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಆದರೆ ಎ.ಸಿ. ಇಲ್ಲದ ಮನೆಗಳಿಗೂ, ಬೀಗ ಹಾಕಿದ ಕಟ್ಟಡ ಗಳಿಗೂ ಸಿಕ್ಕಾಬಟ್ಟೆ ಶುಲ್ಕ ಹಾಕಿದ್ದಾರೆ. ಇದೆಲ್ಲಾ ನೋಡಿದರೆ ವಿದ್ಯುತ್ ಇಲಾಖೆ ಯವರು ಗ್ರಾಹಕರನ್ನು ಸುಲಿಗೆ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಪ್ರತಿ ತಿಂಗಳು ಮೊದಲನೇ ಅಥವಾ ಎರಡನೇ ವಾರದಲ್ಲಿ ಇವರು ಬಿಲ್ ಬರೆಯಲು ಮನೆಗಳಿಗೆ ಬರುತ್ತಾರೆ. ಲಾಕ್‌ಡೌನ್ ಆಗಿರುವುದು ಮಾರ್ಚ್ 22 ರಿಂದ ತಮಗೆ ಹೇಗೆ ಬೇಕೋ ಹಾಗೆ ಬಿಲ್ ಸೃಷ್ಠಿ ಮಾಡಿದ್ದಾರೆ. 2 ತಿಂಗಳ ಯೂನಿಟ್ ಒಟ್ಟಿಗೆ ಸೇರಿಸಿ ಸ್ಲ್ಯಾಬ್ ಮಾಡಿರುವುದು ಸರಿಯಲ್ಲ. ಇದು ಕಾನೂನು ಬಾಹಿರ. ಒಟ್ಟು ರೀಡಿಂಗ್‌ನಲ್ಲಿ ಪ್ರತಿ ತಿಂಗಳದ್ದು ಬೇರ್ಪಡಿಸಿ ಆಯಾ ತಿಂಗಳ ಯೂನಿಟ್‌ಗಳಿಗೆ ಅನುಗುಣವಾಗಿ ಸ್ಲ್ಯಾಬ್ ಮಾಡಿ ಶುಲ್ಕ ನಿಗದಿಪಡಿಸಬೇಕಾಗಿತ್ತು. ಇದು ಗ್ರಾಹಕರ ಮೇಲೆ ನಡೆಯುತ್ತಿರುವ ಶೋಷಣೆ. ಉನ್ನತ ಅಧಿಕಾರಿಗಳು ಇದನ್ನು ಆದಷ್ಟು ಬೇಗ ಸರಿಪಡಿಸಿ ಪರಿಷ್ಕೃತ ಬಿಲ್ ನಿಗದಿಪಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸರಿಯಾದ ರೀತಿಯಲ್ಲಿ ಸೂಚನೆ ನೀಡಬೇಕಾಗಿ ಅವರಲ್ಲಿ ವಿನಂತಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ಸರ್ಕಾರದ ಮೇಲೆ ಗ್ರಾಹಕರಿಗೆ ತಪ್ಪು ಅಭಿಪ್ರಾಯ ಬರುತ್ತದೆ. ಆದಷ್ಟು ಬೇಗ ನ್ಯಾಯಯುತವಾದ ರೀತಿಯಲ್ಲಿ ಅಧಿಕಾರಿಗಳು ಸರಿಪಡಿಸದಿದ್ದರೆ ಗ್ರಾಹಕರು ಕೋರ್ಟ್ ಮೊರೆ ಹೋಗಬೇಕಾಗುತ್ತದೆ.
ನೊಂದ ಗ್ರಾಹಕರುಗಳ ಪರವಾಗಿ, ಶ್ರೀಮತಿ ಮಂಜುಳ ಬಸವಲಿಂಗಪ್ಪ, ದಾವಣಗೆರೆ.