ಕೋಟೆ ಕೊಳ್ಳೆ ಹೊಡೆದ ಮೇಲೆ…

ಮಾನ್ಯರೇ,

ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ  ದೇಶದಾದ್ಯಂತ  ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲೂ ಬಹುತೇಕ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ  ದಿನೇದಿನೇ ಹೆಚ್ಚುತ್ತಿದ್ದು, ಪರಿಸ್ಥಿತಿ ಕೈ ಮೀರುವ ಹಂತ ತಲು ಪಿದೆ. ಜೊತೆಗೆ  ಈಗಾಗಲೇ ಎರಡನೇ ಅಲೆಯ ಭೀತಿ  ಶುರುವಾಗಿದೆ. 

ಕೋವಿಡ್ ಹರಡುವಿಕೆಯ ವೇಗಕ್ಕೆ ಕಡಿವಾಣ ಹಾಕಲು ರಾಜ್ಯ  ಸರ್ಕಾರ ಈಗ ತಾನೆ ನಿದ್ದೆಯಿಂದ ಮೈ ಕೊಡವಿ ಎದ್ದು  ಹೊರಬಂ ದಂತೆ ಪರೀಕ್ಷಾ ಪ್ರಮಾಣ ಹೆಚ್ಚಳ, ಸಭೆ-ಸಮಾರಂಭಗಳಿಗೆ ಜನರ ಮಿತಿ, ಸಾಮಾಜಿಕ ಅಂತರ, ಪರಿಷ್ಕರಣೆ ಸೇರಿದಂತೆ ಸರ್ಕಾರ ಹೊಸ ದಾಗಿ ಮಾರ್ಗಸೂಚಿ ಹೊರಡಿಸಿದ್ದು, ಇಷ್ಟು ದಿನ ಪ್ರತಿಭಟನೆಗಳು, ಸಭೆ-ಸಮಾರಂಭಗಳು, ರಾಜಕೀಯ ಸಮಾವೇಶಗಳು, ಧಾರ್ಮಿಕ ಮೀಸಲಾತಿ ಸಮಾವೇಶಗಳು ಸೇರಿದಂತೆ ಲಕ್ಷಾಂತರ ಜನ ಸೇರಿ ಎಗ್ಗಿಲ್ಲದೆ ನಡೆಯುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು. ಈಗ ಎಂದಿನಂತೆ ಬಸ್ ಸಂಚಾರ ಆರಂಭವಾಗಿ ತುಂಬಿ ತುಳುಕುತ್ತಿವೆ. ಶಾಲಾ-ಕಾಲೇಜುಗಳು, ಸಿನಿಮಾ ಮಂದಿರಗಳು ಹೆಚ್ಚು ಜನದಟ್ಟಣೆ ಯಿಂದ ಕೂಡಿವೆ. ಇಷ್ಟುದಿನ ಸರ್ಕಾರ ಗೊತ್ತಿದ್ದೋ, ಗೊತ್ತಿಲ್ಲದೆಯೋ ಎಲ್ಲದಕ್ಕೂ ಬಿಗಿ ಕ್ರಮಗಳಿಲ್ಲದೆ ಸಡಿಲ ಬಿಟ್ಟ  ಪರಿಣಾಮವಾಗಿ ಇಂದು ಕೋವಿಡ್ ಕೇಸ್‌ಗಳು ರಾಜ್ಯಾದ್ಯಂತ ದಿನೇ ದಿನೇ ಹೆಚ್ಚುತ್ತಿವೆ. ಸರ್ಕಾರ ಈ ಮೊದಲೇ ಎಚ್ಚೆತ್ತುಕೊಂಡು ಮೊದಲಿನಂತೆಯೇ ಬಿಗಿ ಕ್ರಮ ಕೈಗೊಂಡು ಕಠಿಣ ನಿಯಮಗಳನ್ನು ಮುಂದುವರೆಸಿಕೊಂಡು ಬಂದಿದ್ದರೆ ರಾಜ್ಯಕ್ಕೆ ಇಂದು ಈ ದುಸ್ಥಿತಿ ಬರುತ್ತಿರಲಿಲ್ಲ.

ಕೇವಲ ಮದುವೆ ಸಮಾರಂಭಗಳು, ಸಾರ್ವಜನಿಕ ಸ್ಥಳಗಳಲ್ಲಿನ ಜನಸಾಮಾನ್ಯರನ್ನೇ ಟಾರ್ಗೆಟ್ ಮಾಡಿ ದಂಡ ವಿಧಿಸುವ ಬದಲು  ಸರ್ಕಾರಿ ಕಚೇರಿಗಳು, ಬಸ್‌ಗಳು, ಸಿನಿಮಾ ಮಂದಿರ, ಶಾಲಾ-ಕಾಲೇಜುಗಳತ್ತಲೂ ವಿಶೇಷವಾಗಿ ಗಮನಹರಿಸಬೇಕಾಗಿದೆ. ರಾಜ್ಯ ಸರ್ಕಾರದ ಈ ನಡೆ ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತಾಗಿದೆ.


– ಮುರುಗೇಶ್ ಡಿ., ದಾವಣಗೆರೆ.

error: Content is protected !!