ಈ ಬಾರಿ ಸಂಪುಟ ವಿಸ್ತರಣೆಯಲ್ಲಿಯೂ ಜಿಲ್ಲೆಗೆ ಸಚಿವ ಸ್ಥಾನ ಮರೀಚಿಕೆಯೇ ?

ಮಾನ್ಯರೇ,

ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟ ವಿಸ್ತರಣೆಯ ಕಸರತ್ತನ್ನು ನಡೆಸುತ್ತಿದ್ದು, ಈಗಿನ ವಾತಾವರಣ ನೋಡಿದರೆ ಈ ಬಾರಿಯೂ ಸಚಿವ ಸ್ಥಾನ ನಮ್ಮ ಜಿಲ್ಲೆಗೆ ಮರೀಚಿಕೆಯೇ ಎಂಬ ಅನುಮಾನ ಬಾರದೇ ಇರದು…

ನಮ್ಮ ಜಿಲ್ಲೆಯಿಂದ ಐದು ಜನ ಬಿಜೆಪಿ ಶಾಸಕರು ಲಿಂಗಾಯತ ಸಮುದಾಯದ 3 (ಸಾಧು ಲಿಂಗಾಯತ 2 ಜಂಗಮ 1) ಎಸ್ಸಿ 1, ಎಸ್ಟಿ 1 ಇದ್ದು, ಲಿಂಗಾಯತ ಸಮುದಾಯದ ಒಳಪಂಗಡ ಸಾಧು ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಗಳು ಆಗಿರುವುದರಿಂದ ಹಾಗೂ ಪಕ್ಷಾಂತರ ಮಾಡಿಕೊಂಡು ಬಂದು ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಬಿ.ಸಿ. ಪಾಟೀಲ್ ಕೂಡ ಈ ಸಮುದಾಯದವರೇ ಆಗಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಇದ್ದು, ಜಿಲ್ಲೆಯ ಇಬ್ಬರು ಸಾಧು ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ದೊರೆಯುವ ಅವಕಾಶ ಕಡಿಮೆ ಎನ್ನಲಾಗುತ್ತಿದೆ. ಇನ್ನು ಮತ್ತೊಬ್ಬ ಶಾಸಕರು ಕೋರ್ಟ್‌ನಿಂದ ಸಿಡಿ ಪ್ರಸಾರಕ್ಕೆ ತಡೆಯಾಜ್ಞೆ ತಂದಿರುವುದು ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಅಡಚಣೆಯಾಗಿದೆ ಎನ್ನಲಾಗುತ್ತಿದೆ.

ಒಬ್ಬ ಎಸ್ಸಿ ಶಾಸಕರಿದ್ದರೂ ಅವರು ಪ್ರಥಮ ಬಾರಿ ಆಯ್ಕೆಯಾಗಿ ರುವುದರಿಂದ ಅವಕಾಶ ಕಡಿಮೆ ಎನ್ನಲಾಗುತ್ತಿದೆ. ಎಲ್ಲರ ನಡುವೆ ಮೂರು ಬಾರಿ ಆಯ್ಕೆಯಾಗಿರುವ ಎಸ್ಟಿ ಸಮುದಾಯದ ಎಸ್.ವಿ.ರಾಮಚಂದ್ರಪ್ಪ ಅವರಿಗೆ ಅವಕಾಶ ದೊರೆತರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದ್ದು, ರಾಜ್ಯಮಟ್ಟದಲ್ಲಿ ಬಿ.ಶ್ರೀರಾಮುಲು, ಬಾಲಚಂದ್ರ ಜಾರಕಿಹೊಳಿ ಅಂತಹ ಘಟಾನುಘಟಿ ನಾಯಕರುಗಳು ಎಸ್ಟಿ ಕೋಟಾದಡಿ ಸಚಿವರಾದರೆ, ಇವರ ಆಯ್ಕೆ ತಪ್ಪಬಹುದು ಎನ್ನಲಾಗುತ್ತಿದೆ. ಇದನ್ನೆಲ್ಲಾ ನೋಡಿದರೆ ಅಂತಿಮವಾಗಿ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಮರೀಚಿಕೆಯೇ ?


– ಕೆ.ಎಲ್.ಹರೀಶ್ ಬಸಾಪುರ

error: Content is protected !!