ಅಂತರ್ಜಾಲ ಮಾಧ್ಯಮಗಳಲ್ಲಿ ನನ್ನದೊಂದು ಮನವಿ..

ಮಾನ್ಯರೇ,

“ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ಶಾಲಾ ಮಕ್ಕಳಿಗೆ  ಬೇಸಿಗೆ ರಜೆ ನೀಡಲಾಗಿದೆ ಹಾಗೂ ಪರೀಕ್ಷೆ ಇಲ್ಲದೇ ಮುಂದಿನ ತರಗತಿಗೆ ಉತ್ತೀರ್ಣ ಮಾಡಲಾಗಿದೆ” ಎನ್ನುವ ಗಾಳಿ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿ ಬಹುತೇಕ ಹೆಚ್ಚಿನ ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳನ್ನು ಹಲವು ರೀತಿಯಲ್ಲಿ ಕಾಡಿತು.

ಮಾಧ್ಯಮಗಳೇ, ಅನಾವಶ್ಯಕ ನೈಜವಲ್ಲದ ಸುದ್ದಿಗಳನ್ನು ಬಿತ್ತರಿಸುವುದರಿಂದ ನಮಗಾಗೋ(ನಾನೋರ್ವ ಶಿಕ್ಷಕಿ) ಮಾನಸಿಕ ಹಿಂಸೆಗೆ ಪರಿಹಾರ ನೀಡುವವರು ಯಾರು??

ಕೋವಿಡ್ ಲಾಕ್ ಡೌನ್ ನಿಂದಾಗಿ ವರ್ಷ ಪೂರ್ತಿ ಶಿಕ್ಷಣದಿಂದ ದೂರ ಉಳಿದ ವಿದ್ಯಾರ್ಥಿಗಳನ್ನು ಪುನಃ ಮೊದಲಿನ ಸ್ಥಿತಿಗೆ ತರುವಲ್ಲಿ ನಾವು ಮಾಡಿದ ಶ್ರಮದ ಹಿಂದಿನ ಅರಿವು ನಿಮಗೆ ಸ್ವಲ್ಪವಾದರೂ ತಿಳಿದಿದೆಯೇ?

  ಎಲ್ಲೋ ಕಳೆದುಹೋಗಿದ್ದ ನಮ್ಮ ಮಕ್ಕಳ ಕಲಿಕಾ ಲಯವನ್ನು ಮತ್ತೆ ಮರಳಿ ಗಳಿಸಿ, ಅವರಲ್ಲಿ ಕಲಿಯೋ ಆಸಕ್ತಿ ಚಿಗುರಿಸಿ, ಉತ್ತಮ ಸ್ಪಂದನೆ ಸಿಗುವ ಈ ಸಂದರ್ಭದಲ್ಲಿ ಮತ್ತೆ ರಜೆ ಅನ್ನೋ ಸುಳ್ಳು ಸುದ್ದಿಗೆ ಆ ಮಕ್ಕಳ ಮನಸ್ಥಿತಿ ಏನಾಗಬೇಕು? ಕ್ಷಣಮಾತ್ರದಲ್ಲಿ ಮನಸ್ಸು ವಿಚಲಿತವಾಗಿ ಮತ್ತೆ ಹೆಜ್ಜೆ ಹಿಂದಿಟ್ಟು ಕಲಿಕೆಯಿಂದ ವಿಮುಖರಾದರೆ ನಾವು ಶಿಕ್ಷಕರು ಇದುವರೆಗೂ ಮಾಡಿದ ಪ್ರಯತ್ನ ಬೋರ್ಗಲ್ಲ ಮೇಲೆ ಮಳೆ ಸುರಿದಂತಾಗುತ್ತದೆ. ಇದರಿಂದ ನಮಗಾಗೋ ಮಾನಸಿಕ ಒತ್ತಡ, ಮಕ್ಕಳಿಗಾಗೋ ಗೊಂದಲ ಇವುಗಳಿಗೆಲ್ಲ ಮಾಧ್ಯಮದವರಲ್ಲಿ ಉತ್ತರ ಇದೆಯೇ?

ಕೋವಿಡ್ ನಿಂದ ಹಿಂದುಳಿದ ಶಿಕ್ಷಣ ಕ್ಷೇತ್ರ ಮರಳಿ ತನ್ನ ಲಯ ಕಂಡುಕೊಳ್ಳುವಲ್ಲಿ ನಾವು ನಮ್ಮಿಂದಾದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದುದರಿಂದ ಅಂತರ್ಜಾಲ ಮಾಧ್ಯಮಗಳಿಗೆ ನನ್ನ ಕಳಕಳಿಯ ವಿನಂತಿ ಏನೆಂದರೆ ದಯವಿಟ್ಟು ಸುದ್ದಿ ಬಿತ್ತರಿಸುವ ಮುಂಚೆ ವಿಷಯ ಗಳ ನೈಜತೆಯನ್ನು ಪರಿಶೀಲಿಸಿ,ತದನಂತರ ಬಿತ್ತರಿಸಿ. 

ಆ ಮೂಲಕ ಉಂಟಾಗುವ ಗೊಂದಲ , ಒತ್ತಡಗಳನ್ನು ನಿವಾರಿಸಿ, ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿಸಲು ಕೈಜೋಡಿಸಿ, ಧನ್ಯವಾದಗಳು.


– ಮಂಜುಳಾ ಪ್ರಸಾದ್, ಸಹಶಿಕ್ಷಕಿ, ಕೆಪಿಎಸ್ ತ್ಯಾವಣಿಗೆ.

error: Content is protected !!