ಹುಡುಕಿ ಕೊಡಿ ಮಾಯಕೊಂಡ ಕ್ಷೇತ್ರದ ಮಾಜಿ, ಹಾಲಿ, ಭಾವೀ ಜನಪ್ರತಿನಿಧಿಗಳನ್ನ !

ಮಾನ್ಯರೇ,

ಮಾಯಕೊಂಡ ಕ್ಷೇತ್ರದ ಜನಪ್ರತಿನಿಧಿಗಳೇ ಎಲ್ಲಿ ಕಾಣೆಯಾಗಿದ್ದೀರಾ? ನಿಮ್ಮ ಕ್ಷೇತ್ರದ ಅನೇಕ ಹಳ್ಳಿಗಳು ಕೊರೊನಾಕ್ಕೆ ಒಳಗಾಗ್ತಿವೆ. ಅನೇಕ ಜನರು ರೋಗಗ್ರಸ್ಥರಾಗ್ತಿದ್ದಾರೆ. ಕೆಲ ಕುಟುಂಬಗಳು ಬೀದಿಗೆ ಬಿದ್ದಿವೆ. ಇವೆಲ್ಲಾ ತಮಗೆ ತಿಳಿಯುತ್ತಿಲ್ಲವೇ? ಯಾಕೆ ಮೌನವಾಗಿದ್ದೀರಾ ? ಚುನಾವಣೆ ಸಮಯದಲ್ಲಿ ಬಂದು ಕೈ ಮುಗಿದು, ಒಂದು ಓಟು ಕೊಡಿ ಎಂದು ಅಂಗಲಾಚುವ ನೀವು, ಈಗ ಅದೇ ಜನ, ನಿಮ್ಮ ಪಕ್ಷದವರೇ ಸಾವನ್ನಪ್ಪುತ್ತಿದ್ದಾರೆ. ನಿಮಗೆ ಆ ನಿಮ್ಮ ಪಕ್ಷದ ಕಾರ್ಯಕರ್ತರು ಮೃತಪಟ್ಟಿದ್ದರೂ ಅವರ ಕುಟುಂಬಗಳಿಗೆ ಸಾಂತ್ವನಿಸಲು ತಮಗೆ ಸಮಯ ಸಿಕ್ಕಿಲ್ಲವೋ ! ಅದೆಷ್ಟೋ ನಿಮ್ಮ ಪಕ್ಷದ ಕಾರ್ಯಕರ್ತರು ನಿಮ್ಮ ಗೆಲುವಿಗೆ ಹಗಲಿರುಳು ಶ್ರಮಿಸಿ, ತಮ್ಮನ್ನು ಜನಪ್ರತಿನಿಧಿಗಳನ್ನಾಗಿ ಮಾಡಿದ್ದಾರೆ ಆ ಕೃತಜ್ಞತೆಯು ತಮಗೆ ಯಾಕೆ ? ಇಲ್ಲದಾಗಿದೆ.

ಕೊನೆ ಪಕ್ಷ ಅವರ ಕುಟುಂಬಗಳಿಗೆ ಒಂದೇ ಒಂದು ದೂರವಾಣಿ ಕರೆ ಮಾಡಿ, ಸಮಾಧಾನಿಸುವ ಪ್ರಯತ್ನ ಮಾಡುತ್ತಿಲ್ಲವೇಕೆ ? ಕೆಲವು ಜನಪ್ರತಿನಿಧಿಗಳು ಅವರ ಕ್ಷೇತ್ರದ ಮತದಾರರ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿರುವುದನ್ನು ಗಮನಿಸಿದ್ದೀರಾ, ನೀವು ಲಕ್ಷ, ಕೋಟಿಗಟ್ಟಲೇ ಹಣ ವ್ಯಯಿಸಬೇಡಿ. ನಿಮ್ಮ ಕ್ಷೇತ್ರದ ಮತದಾರ, ಅವರ ಕುಟುಂಬ ನೋವಿನಲ್ಲಿದ್ದರೆ ಕೇವಲ ಒಂದೇ ಒಂದು ಸಾಂತ್ವನದ ನುಡಿಗಳನ್ನಾಡಿ, ನೀವು ಕ್ಷೇತ್ರದ ಜನರೊಡನೆ ಇದ್ದೀರಿ ಅನ್ನುವ ಭಾವನೆ ಮೂಡಿಸಿ, ಮತದಾರರ ಕಷ್ಟ ಸುಖಗಳಲ್ಲಿ ಭಾಗಿಯಾಗಿ. ಅಷ್ಟೇ ಸಾಕು ನಿಮ್ಮನ್ನ ಗೆಲ್ಲಿಸಿದ ಈ ಕ್ಷೇತ್ರದ ಮತದಾರರಿಗೆ.

ನಿಮ್ಮ ಕ್ಷೇತ್ರದ ಕೊರೊನಾ ರೋಗಿಗಳಿಗೆ ಉತ್ತಮ ವಾತಾವರಣ, ಚಿಕಿತ್ಸೆ ದೊರಕಿಸಿಕೊಡಿ, ಇದು ನೀವು ಮತದಾರರಿಗೆ ತೀರಿಸುವ ಋಣ.

ಇದೀಗ ನೀವು ಋಣ ತೀರಿಸುವ ಸಮಯ ಬಂದಿದೆ. ಇದು ತಾವು ತಮ್ಮ ಮತದಾರರ ಮನಗಳಲ್ಲಿ ಶಾಶ್ವತವಾಗಿ ನೆಲೆಸಲು ಸದಾವಕಾಶವೂ ಆಗಿದೆ. ಏಳಿ ಎದ್ದೇಳಿ ಮಾಜಿ, ಹಾಲಿ, ಭಾವೀ ಜನಪ್ರತಿನಿಧಿಗಳೇ ನಿಮ್ಮ ಕ್ಷೇತ್ರದ ಕಾಳಜಿಗೆ, ರೋಗ ಮುಕ್ತ ಕ್ಷೇತ್ರವಾಗಲು ಟೊಂಕಕಟ್ಟಿ ನಿಲ್ಲಿ, ಕ್ಷೇತ್ರಕ್ಕೆ ನೀವೇ ಈಗ ಸೈನ್ಯಾಧಿಕಾರಿಯಂತೆ ಹೋರಾಡಿ. ರೋಗ ಮುಕ್ತ ಕ್ಷೇತ್ರವಾಗಿಸಿ. ಮುಂದೆಯೂ ನೀವೇ ಜನಪ್ರತಿನಿಧಿಗಳಾಗುವ ಹಂಬಲವನ್ನು ಜನರು ಹೇಳುವಂತೆ ಮಾಡಬೇಕಿದೆ. ಅದು ಕ್ಷೇತ್ರದ ಜನರ ಕಷ್ಟಗಳನ್ನ ನಿವಾರಿಸಿ, ಧೈರ್ಯ ತುಂಬಿ ಜನರ ಪ್ರಾಣ ಉಳಿಸಿ.

ಆ ಭರವಸೆಯ ಹಾದಿಯನ್ನ ನೋಡುತ್ತಿರುವ ಕ್ಷೇತ್ರದ ಮತದಾರರು


– ಅಣಬೇರು ತಾರೇಶ್ ಕೆ.ಪಿ., ದಾವಣಗೆರೆ.

error: Content is protected !!