ಮಾನ್ಯರೇ,
ರಾಜಕಾರಣ ಮತ್ತು ರಾಜಕಾರಣಿಗಳು ಎಂದರೆ ಅಸಹ್ಯ ಪಡುವಂತಹ ಪರಿಸ್ಥಿತಿ ಈಗಿನ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಅನ್ನಿಸದೇ ಇರದು…
ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತರುವಂತಹ ಸ್ಥಿತಿಗೆ ರಾಜಕಾರಣಿಗಳು ಬಂದಿದ್ದಾರೆ ಎಂದರೆ ಈಗಿರುವ ರಾಜಕಾರಣದ ವ್ಯವಸ್ಥೆಯನ್ನು ಅನುಮಾನಿಸದೇ ಇರಲು ಸಾಧ್ಯವಿಲ್ಲ ಎನ್ನುವಂತಾಗಿದೆ.
ಪಕ್ಷಾಂತರ ಮಾಡಿಕೊಂಡು ಬಿ.ಎಸ್.ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವರಾದಂತಹ ನಾಯಕರುಗಳು ತಮ್ಮ ಸಿಡಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದು, ಅವರ ನಂತರ ಕೇಂದ್ರದ ಸಚಿವರಾದ ಸದಾನಂದಗೌಡರೂ ಸಹ ಕೋರ್ಟ್ ಮೆಟ್ಟಿಲೇರಿ ಸಿಡಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದರು. ಈಗ ಮಾಜಿ ಸಚಿವರು ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರೂ ಸಹ ಸಿಡಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವುದನ್ನು ನೋಡಿದರೆ, ಸರ್ಕಾರಗಳ ರಚನೆ ಮತ್ತು ಬದಲಾವಣೆಗಳು ಶಾಸಕರುಗಳ ಸಿಡಿಗಳ ಆಧಾರದ ಮೇಲೆ ನಡೆಯುತ್ತವೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಇದೇ ಪರಿಸ್ಥಿತಿಯೇ ಮುಂದುವರೆಯುತ್ತಾ ಹೋದರೆ ರಾಜಕಾರಣಿಗಳನ್ನು ಯಾರೂ ನಂಬದಂತಹ ಪರಿಸ್ಥಿತಿ ಅತಿ ಶೀಘ್ರದಲ್ಲೇ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಯಾರೋ ಕೆಲವೊಬ್ಬ ರಾಜಕಾರಣಿಗಳು ಮಾಡುವ ಇಂತಹ ಕಾರ್ಯಕ್ಕೆ ಉತ್ತಮ ನಡತೆಯ ರಾಜಕಾರಣಿಗಳನ್ನೂ ಸಹ ಅನುಮಾನದ ದೃಷ್ಟಿಯಿಂದ ನೋಡುವ ಸ್ಥಿತಿ ಬಂದಿದೆ.
ನಿಜವಾಗಿಯೂ ತಮ್ಮ ಸಿಡಿ ಇರದಿದ್ದರೆ, ಬಹಿರಂಗ ಪಡಿಸಿದ ವ್ಯಕ್ತಿಗಳ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿ ಶಿಕ್ಷಿಸಬೇಕು. ಯಾವ ತಪ್ಪೂ ಮಾಡಿಲ್ಲ ಎನ್ನುವುದಾದರೆ ಭಯ ಪಡುವುದಕ್ಕಿಂತ ಧೈರ್ಯವಾಗಿ ಎಲ್ಲವನ್ನೂ ಎದುರಿಸಬೇಕು ಅಲ್ಲವೇ…?
– ಕೆ.ಎಲ್.ಹರೀಶ್ ಬಸಾಪುರ.