ಪಾಲಿಕೆಯ ತೆರಿಗೆಗೊಂದು ತೆರಿಗೆ

ಮಾನ್ಯರೇ,

ದಾವಣಗೆರೆ ಮಹಾನಗರ ಪಾಲಿಕೆಯು ಆಸ್ತಿ, ನೀರಿನ ಕಂದಾಯ ಗಳನ್ನು  ಕಟ್ಟಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಿದೆ. ಆದರೆ ಇದಕ್ಕೆ ಕ್ಯೂ ನಿಲ್ಲಲು ನಿವಾಸಿಗಳು ಗಟ್ಟಿ ಇರಬೇಕಾದ ಅನಿವಾರ್ಯತೆ ಇದೆ. 

ಅರ್ಜಿ ಪಡೆಯಲು ಸರದಿ ನಿಲ್ಲಬೇಕು. ಗಂಟೆಗಳ ನಂತರ ಅರ್ಜಿ ಸಿಗುತ್ತದೆ. ಚಲನ್ ಪಡೆದು ಕಟ್ಟಲು ಹಣದೊಂದಿಗೆ ಬ್ಯಾಂಕಿನಲ್ಲಿ ಸರದಿ ನಿಲ್ಲಬೇಕು. ಆ ಚಲನ್ ಮೂರು ಪ್ರತಿಗಳನ್ನು ಹೊಂದಿದೆ. ಎರಡನ್ನು ಬ್ಯಾಂಕಿನವರು ಇಟ್ಟುಕೊಂಡು ಒಂದನ್ನು ಗ್ರಾಹಕರಿಗೆ ಕೊಡುತ್ತಾರೆ. ಆ ಒಂದು ಪ್ರತಿಯನ್ನು ಜೆರಾಕ್ಸ್ ಮಾಡಿಸಿ ಕೊಂಡು ಮತ್ತೆ ಸರದಿಯಲ್ಲಿ ನಿಂತು ಪ್ರತಿಯನ್ನು ಕೊಟ್ಟು ಸ್ವೀಕೃತಿ ಪಡೆಯಬೇಕು. ಇಷ್ಟು ಸರದಿ ನಿಂತಿದ್ದಲ್ಲದೆ, ಜೆರಾಕ್ಸ್‌ಗೆ ನಿವಾಸಿಗಳು ದುಪ್ಪಟ್ಟು ಹಣ ಪೀಕಬೇಕು, ಇದೇಕೆ ಎಂದು ಅರ್ಥವಾಗುವುದಿಲ್ಲ. ಚಲನ್‌ನ ಪ್ರತಿಯೇ ನಾಲ್ಕು ಇರುವ ಹಾಗೆ ಏಕೆ ಮಾಡಬಾರದು? ಅಥವಾ ಬ್ಯಾಂಕಿನವರಿಗೇಕೆ ಎರಡು ಪ್ರತಿ ಒಂದನ್ನು ಪುನಃ ಪಾಲಿಕೆಗೆ ಕೊಡುತ್ತಾರಲ್ಲವೇ? ನಿವಾಸಿಗಳಿಗೇಕೆ ಈ ಹೊರೆ. `ಪೇಪರ್ ಲೆಸ್’ನ ಈ ಕಾಲದಲ್ಲಿ ಏಕಿಷ್ಟು ಹಣ ಮತ್ತು ಹಾಳೆ ಹಾಳು ಮಾಡುತ್ತಿದ್ದಾರೆಯೋ ಗೊತ್ತಿಲ್ಲ?

ತೆರಿಗೆಗೊಂದು ತೆರಿಗೆ ಬೇಕೆ?  ಮೊದಲೇ ಹೆಚ್ಚಿನ ತೆರಿಗೆಗಳಿಂದ ನಿವಾಸಿಗಳು ನಲುಗಿ ಹೋಗಿದ್ದಾರೆ. ಸಾಲದ್ದಕ್ಕೆ ತೆರಿಗೆ ಕಟ್ಟಲು ಒಬ್ಬರು ಒಂದು ದಿನ ಪೂರ್ತಿ ಕಳೆಯಬೇಕಾದ ಅತೀ ಸುಲಭದ ವ್ಯವಸ್ಥೆ ಬೇರೆ ಮಾಡಿದ್ದಾರೆ. 

ಅಶಕ್ತರೂ ದಾವಣಗೆರೆಯಲ್ಲಿ ಇದ್ದಾರೆ. ಬಡವರೂ ಇದ್ದಾರೆ ಎಂಬುದನ್ನು ಗಮನದಲ್ಲಿಟ್ಟಕೊಂಡು, ಸುಲಭ ಗೊಳಿಸಿ ಜೆರಾಕ್ಸ್ ತೆರಿಗೆಯನ್ನು ತಪ್ಪಿಸಿ. ವಿಶೇಷ ಎಂದರೆ ಈ ಸಾಲಿನ ಕಂದಾಯಗಳನ್ನು ಇನ್ನೂ ಕಟ್ಟಿಸಿಕೊಳ್ಳುತ್ತಿಲ್ಲ. ಬಿಸಿಲಲ್ಲಿ ಪ್ರಾಮಾಣಿಕ ತೆರಿಗೆದಾರರು ಪಾಲಿಕೆಗೆ ಅಲೆದು ಅಲೆದು ಬಿಸಿಲ ಹಣ್ಣನ್ನು ತಿಂದು ಹೈರಾಣಾಗುತ್ತಿದ್ದಾರೆ. ಇದೇಕೆ ಇಂತಹ ಶಿಕ್ಷೆ. ದಯವಿಟ್ಟು ಪರಿಶೀಲಿಸಿ, ಸರಿಪಡಿಸಿ. ಶೋಷಣೆ ಮಾಡಬೇಡಿ…..


– ಎಸ್.ಜಿ. ದಾಸ್, ದಾವಣಗೆರೆ.

error: Content is protected !!