ಮೂರೇ ನಿಮಿಷದಲ್ಲಿ ಎಳ್ಳು ನೀರು ಬಿಟ್ಟ ದೇವರಮನೆ ಶಿವಕುಮಾರ್‌

ಮಾನ್ಯರೇ,

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಾದೇಶ ದೊರೆತಿದ್ದರೂ ಸಹ, ಅನ್ಯಮಾರ್ಗದಿಂದ ಬಿಜೆಪಿ ಕಳೆದ ಬಾರಿ ಅಧಿಕಾರ ಹಿಡಿದಿತ್ತು. ಆದರೆ ಈ ಬಾರಿ ಅಧಿಕಾರ ಹಿಡಿಯಬೇಕು ಎಂದು ಕಳೆದ ಮೂರು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷದ ಪಾಲಿಕೆಯ ಸದಸ್ಯರುಗಳು ಪರಿಶ್ರಮ ಪಡುತ್ತಿದ್ದರು, ಪಕ್ಷೇತರ ಸದಸ್ಯರನ್ನು ಓಲೈಕೆ ಮಾಡಲು ಶ್ರಮಪಟ್ಟು ಆಶಾಭಾವನೆಯಲ್ಲಿದ್ದರು, ಕಾನೂನಾತ್ಮಕ ಹೋರಾಟದಲ್ಲೂ ಸಹ ಮುಂಚೂಣಿ ಪ್ರಯತ್ನ ಪಡುತ್ತಿದ್ದರು.

ಇಟ್ಟಿಗುಡಿ, ಹುಲ್ಮನಿ ಎಂಬ ನಾಯಕರುಗಳು ಕಳೆದ ಮೂರು ತಿಂಗಳುಗಳಿಂದ ಮನೆಗೆ ಸೇರದೆ ಪಕ್ಷ ಈ ಬಾರಿ ಅಧಿಕಾರ ಹಿಡಿಯಲೇಬೇಕು ಎಂಬ ಪಣತೊಟ್ಟು, ದಾವಣಗೆರೆ-ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದೆ ಬಂತು ವಿನಃ ಅಧಿಕಾರ ಸಿಗಲಿಲ್ಲ.

ಗಡಿಗುಡಾಳ್, ದೇವರಮನೆ, ನಾಗರಾಜ್, ಚಮನ್ ಸಾಬ್ ಇನ್ನಿತರೆ ಪಾಲಿಕೆ ಸದಸ್ಯರುಗಳು ತಮ್ಮ ಅನುಭವದ ಸಲಹೆಗಳನ್ನು ನೀಡುವ ಮೂಲಕ ಜನಾದೇಶದ ಪಕ್ಷ ಈ ಬಾರಿ ಅಧಿಕಾರಕ್ಕೆ ಬರಲಿ ಎಂದು ಪ್ರಯತ್ನ ಪಡುತ್ತಿದ್ದರು. ಆದರೆ, ಅಂತಿಮವಾಗಿ ಮುಂದಾಳತ್ವ ವಹಿಸಿಕೊಂಡು ಜೊತೆ ಯಲ್ಲಿದ್ದವರೇ, ಬೆನ್ನಿಗೆ ಚೂರಿ ಹಾಕಿ ಕೊನೆಯ ಕ್ಷಣದಲ್ಲಿ ಪಲಾಯನ ಮಾಡಿ ತಮ್ಮನ್ನು ಗುರುತಿಸಿ ಟಿಕೆಟ್ ನೀಡಿದ ಪಕ್ಷಕ್ಕೆ, ನಾಯಕರುಗಳಿಗೆ, ಮತ ನೀಡಿದ ಮತದಾರರಿಗೆ ಮೋಸ ಮಾಡಿದರು ಎಂದರೆ ತಪ್ಪಾಗಲಾರದು.

ಪಕ್ಷ ಬಿಟ್ಟು ಹೋಗಬೇಕಿದ್ದರೆ ಬೇರೆ ಸಮಯವಿತ್ತು, ಕೊನೆಯವರೆಗೆ ಜೊತೆಗೆ ಇದ್ದು ಕೊನೆಯ ಕ್ಷಣದಲ್ಲಿ ಮಾಡಿದ ಈ ಮೋಸಕ್ಕೆ, ಅವರೇ ಅವರ ಮನಸ್ಸಾಕ್ಷಿಗೆ ಒಮ್ಮೆ ಕೇಳಿದರೆ  ಪಾಪ ಪ್ರಜ್ಞೆ ಕಾಡದೇ ಇರದು.

ನಂಬಿದ ಪಕ್ಷಕ್ಕೆ, ನಾಯಕರುಗಳಿಗೆ, ಸಹ ಸದಸ್ಯರುಗಳಿಗೆ ನೀವು ಮಾಡಿದ ಮೋಸಕ್ಕೆ ಆ ದೇವರು ನಿಮಗೆ ಒಳ್ಳೆಯದು ಮಾಡಲಿ…..


– ಕೆ.ಎಲ್.ಹರೀಶ್, ಬಸಾಪುರ.

error: Content is protected !!