ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ಜಾತ್ರೆಗಳಲ್ಲೊಂದಾದ ಹಿಂದಿನ ಬಳ್ಳಾರಿ ಜಿಲ್ಲೆಯ (ಈಗ ವಿಜಯನಗರ ಜಿಲ್ಲೆ) ಇತಿಹಾಸ ಪ್ರಸಿದ್ಧ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವವು ಮಾರ್ಚ್ 7ರಂದು ನಡೆಯಬೇಕಿದ್ದು, ಕೊರೊನಾ ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಜಾತ್ರೋತ್ಸವವನ್ನು ಜಿಲ್ಲಾಡಳಿತ ರದ್ದುಗೊಳಿಸಿರುವುದು ಲಕ್ಷಾಂತರ ಸಂಖ್ಯೆಯ ಭಕ್ತರಲ್ಲಿ ನಿಜಕ್ಕೂ ಬೇಸರ ತರಿಸಿದೆ.
ರಾಜಕೀಯ ಸಮಾವೇಶಗಳು, ಧಾರ್ಮಿಕ ಸಮ್ಮೇಳನಗಳು, ಚಿತ್ರಮಂದಿರ ಗಳು ತುಂಬಿ ತುಳುಕುತಿದ್ದು ದಿನಂಪ್ರತಿ ಪ್ರತಿಭಟನೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಜೊತೆಗೆ ಶಾಲಾ-ಕಾಲೇಜುಗಳು ಪ್ರಾರಂಭವಾಗಿ ಯಥಾಸ್ಥಿತಿಗೆ ಮರಳಿವೆ, ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಹೀಗಿರುವಾಗ ಕೇವಲ ಕೊರೊನಾ ನೆಪವೊಡ್ಡಿ ಜಾತ್ರೆ ರದ್ದುಪಡಿಸಿರುವುದು ಖಂಡನಾರ್ಹ.
ಈ ಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯ ಮೂಲಕ ತೆರಳಿ, ತಮ್ಮ ಹರಕೆ ಯನ್ನು ಸಲ್ಲಿಸುತ್ತಾರೆ. ಇತ್ತೀಚೆಗೆ ನಡೆದ ಹಲವಾರು ಮೀಸಲಾತಿ ಹೋರಾಟಗಳಲ್ಲಿ ಲಕ್ಷಾಂತರ ಸಂಖ್ಯೆಯ ಜನರು ಭಾಗವಹಿಸಿದ್ದರು. ಆಗ ಮಾತ್ರ ಕೊರೊನಾ ಹರಡದೆ ಇದ್ದಿದ್ದು ಈಗ ಜಾತ್ರೆಯಲ್ಲಿ ಮಾತ್ರ ಹರಡುವುದೇ? ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿದಿದೆ. ಈಗಾಗಲೇ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆಗಳು, ಯಶಸ್ವಿ ಯಾಗಿ ನಡೆದಿರುವ ಉದಾಹರಣೆಗಳೂ ಇವೆ.
ಜನರ ಆರಾಧ್ಯ ದೈವ ಆಗಿರುವ ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆಗೆ ರಾಜ್ಯ ಸರ್ಕಾರ ದಯಮಾಡಿ ಅನುಮತಿ ನೀಡಿ ಭಕ್ತರ ಕೃಪೆಗೆ ಪಾತ್ರರಾಗಬೇಕಾಗಿದೆ.
– ಮುರುಗೇಶ ಡಿ., ದಾವಣಗೆರೆ.