ರೋಮ್‌ ನಗರ ಹೊತ್ತಿ ಉರಿಯುತ್ತಿರುವಾಗ

ಮಾನ್ಯರೇ,

ಒಂದು ಕಾಲಕ್ಕೆ ಉದ್ಯಾನ ನಗರಿಯಾಗಿದ್ದ ಬೆಂಗಳೂರು ನಗರ ಸಿಲಿಕಾನ್‌ ಸಿಟಿಯಾಗಿದ್ದು, ಪ್ರಸ್ತುತ `ಬೆಂಗಳೂರು ಸಾವಿನೂರು’ ಎಂದು ಮಾಧ್ಯಮಗಳು ಹಗಲಿರುಳೂ ಸುದ್ದಿ ಬಿತ್ತರಿಸುತ್ತಲಿದ್ದರೂ, ಕುಂಭಕರ್ಣನ ನಿದ್ರೆಯಿಂದ ಸರ್ಕಾರ ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದೇ ಇರುವುದು ಈ ದೇಶದ ದೌರ್ಭಾಗ್ಯ.

ರೋಮ್‌ ನಗರ ಹೊತ್ತಿ ಉರಿಯುತ್ತಿರುವಾಗ ಅದರ ದೊರೆ ನೀರೋ ಪಿಟೀಲು ಭಾರಿಸುತ್ತಿದ್ದ ಎಂಬ ನಾಣ್ನುಡಿ ನೂರಕ್ಕೆ ನೂರರಷ್ಟು ಕೆಪ್ಪ, ಕುರುಡ, ಕುಂಟ ಕರ್ನಾಟಕ ಸರ್ಕಾರಕ್ಕೆ ಅನ್ವಯಿಸುತ್ತದೆ.

ದಿನೇ ದಿನೇ ಕೊರೊನಾ ಉಪಟಳ ಕೈ ನಿಲುಕದೇ ನಾಗಾಲೋಟದಲ್ಲಿ ಓಡುತ್ತಲಿದ್ದರೂ, ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಈಗಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿದ್ದರೂ ಕೈಕಟ್ಟಿ ಕುಳಿತಿರುವ ಕಾರ್ಯಾಂಗ, ಶಾಸಕಾಂಗಕ್ಕೆ ಏಕೆ ಗರ ಬಡಿದಿದೆ ಎಂಬುದು `ಒಂದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ನನ್ನಂತ ಶ್ರೀಸಾಮಾನ್ಯನಿಗೆ ಕಾಡುತ್ತಿದೆ’.

ಈಗ ತತ್‌ಕ್ಷಣದಲ್ಲೇ ಕ್ರಮ ಕೈಗೊಂಡರೂ ಕೂಡ, `ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಎಂಬುದು ಯಾರಿಗಾದರೂ ಮೇಲ್ನೋಟಕ್ಕೆ ಕಂಡುಬರುತ್ತದೆ.

ಇಂತಹ ಕೆಟ್ಟ ಸಮಯದಲ್ಲಿ ದಿಟ್ಟ ಕ್ರಮ ಕೈಗೊಳ್ಳದಿದ್ದರೆ, ಮುಂದೆ ಅನಾಹುತ ಕಟ್ಟಿಟ್ಟ ಬುತ್ತಿಯಾಗಿ, ಕರ್ನಾಟಕವು ಚೀನಾ, ಇಟಲಿಗಳನ್ನು ಹಿಂದೆ ಹಾಕಿ ಮುನ್ನುಗ್ಗುವುದರಲ್ಲಿ ಯಾವುದೇ ಸಂಶಯ ಇಲ್ಲ.

ಈ ಮಾಸಾಂತ್ಯದವರೆಗೆ ಬೆಂಗಳೂರು ಮಹಾನಗರದಾದ್ಯಂತ ಹಾಗೂ ಕೋವಿಡ್‌ ವಿಷಮ ಸ್ಥಿತಿಯಲ್ಲಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮಾಡದೇ ಹೋದರೆ ಮುಂದಿನ ಆಗುಹೋಗುಗಳಿಗೆ ತಲೆದಂಡ ತೆರಬೇಕಾಗುತ್ತದೆ.

ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ, ಅಂತ್ಯ ಸಂಸ್ಕಾರಕ್ಕೆ ಪಾಳೆ ಹಚ್ಚುವ ಪರಿಸ್ಥಿತಿ ಬಂದುದಕ್ಕೆ ಈಗ ಆಳುವ ಸರ್ಕಾರ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇಲ್ಲವೇ ನ್ಯಾಯಾಂಗ ಮಧ್ಯೆ ಪ್ರವೇಶಿಸಿ ಈ ಹಾವು-ಏಣಿ ಆಟವನ್ನು ತಪ್ಪಿಸಬೇಕಾಗುತ್ತದೆ.

ಇದಕ್ಕೆ ಅವಕಾಶ ನೀಡದೇ ಈ ಕೂಡಲೇ ದಿಟ್ಟ ಕ್ರಮ ಕೈಗೊಂಡು ಸನ್ಮಾನ್ಯ ಯಡಿಯೂರಪ್ಪನವರು ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು ಕರುನಾಡಿನ ಜನತೆಯ ಕರುಣೆಗೆ ಪಾತ್ರರಾಗಬೇಕು, ಇಲ್ಲವೇ ಕರುಣಾಜನಕ ಸ್ಥಿತಿಗೆ ಸಾಕ್ಷಿಯಾಗಬೇಕಾದೀತು ಎಂಬ ಎಚ್ಚರಿಕೆ ನನ್ನದು.  


– ಎಂ.ಕೆ. ಬಕ್ಕಪ್ಪ, ದಾವಣಗೆರೆ.

error: Content is protected !!