ಶುಶ್ರೂಷಕಿ ಜೀವರಕ್ಷಕಿ

ಮಾನ್ಯರೇ,

ಮೋದಿಯವರು ಜನತಾ ಕರ್ಫ್ಯೂಗೆ ಕರೆ ನೀಡಿದಾಗ ಸಾಕಷ್ಟು ಜನರು ಎಲ್ಲರ ಜೀವವನ್ನು ರಕ್ಷಿಸುತ್ತಿರುವಂತಹ ವೈದ್ಯರು ಹಾಗೂ  ನರ್ಸ್‌ಗಳಿಗೆ ಅಭಿನಂದನೆಯನ್ನು ಸಲ್ಲಿಸಲು, ಅವರನ್ನು ಹುರಿದುಂಬಿಸಲು ಚಪ್ಪಾಳೆಗಳನ್ನು ತಟ್ಟಿ  ಎಂದು ಹೇಳಿದರು. 

ಸಾಮಾನ್ಯವಾಗಿ ಜನರಿಗೆ ಅರ್ಧ ಗಂಟೆಗಳ ಕಾಲ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡರೆ ಉಸಿರಾಡಲು ತೊಂದರೆಯಾಗುತ್ತದೆ. ಹಾಗಾದರೆ ಸೋಂಕು ದೃಢಪಟ್ಟ ವ್ಯಕ್ತಿಯ ಮುಂದೆ ಆರರಿಂದ ಹನ್ನೆರಡು ಗಂಟೆಗಳ ಕಾಲ ಸತತವಾಗಿ ಪಿಪಿ ಕಿಟ್ ಧರಿಸಿ ಕಾರ್ಯನಿರ್ವಹಿಸುವ ನರ್ಸ್‌ನ ಮನಸ್ಸು, ದೇಹ, ಆತ್ಮ ದೃಢತೆ ಹೇಗಿರಬಹುದು? ಒಮ್ಮೆ ಬಳಸಿದ ಪಿಪಿ ಕಿಟ್ (ಪರ್ಸನಲ್ ಪ್ರೊಟೆಕ್ಷನ್ ಕಿಟ್) ಗಳನ್ನು ಪುನಃ ಬಳಸುವಂತಿಲ್ಲ. 

ಹಾಗಾದರೆ ಪಿಪಿ ಕಿಟ್ ಗಳಿಗೆ ಇರುವಂತಹ ಮಹತ್ವವು ನರ್ಸ್‌ನ ಜೀವಕ್ಕೆ ಇಲ್ಲವೇ? ಕೇಂದ್ರ ಸರ್ಕಾರ ಕೊರೊನಾ ಸೋಂಕಿನಿಂದ ಸತ್ತ ವ್ಯಕ್ತಿಗೆ 4 ಲಕ್ಷ ಪರಿಹಾರ ಧನ ನೀಡುವಾಗ, ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ  ನರ್ಸ್‌ಗಳಿಗೆ ಸಾಕಷ್ಟು ಪಿಪಿ ಕಿಟ್‌ಗಳನ್ನು ಕೊಡಲು ಹಿಂಜರಿಯುವರೇ? ನರ್ಸ್‌ಗಳಿಗೆ ಕರ್ತವ್ಯ ಮುಗಿಸಿಕೊಂಡು ಹೋಗುವಾಗ ಅಮ್ಮ ಎಂದು ಕರೆಯುವ ಪುಟ್ಟ ಕಂದಮ್ಮವಿರುವುದಿಲ್ಲವೇ? ಕುಟುಂಬ ಇರುವುದಿಲ್ಲವೇ? ದಯವಿಟ್ಟು ಅವರನ್ನು ಕೂಡ ಮನುಷ್ಯರಂತೆ ಕಾಣಿ. ಮೀಡಿಯಾಗಳಲ್ಲಿ ಕೇವಲ ವೈದ್ಯರು ಜೀವ ರಕ್ಷಿಸುತ್ತಾರೆ ಎಂದು ಹೇಳುತ್ತಾರೆ. 

ಎಷ್ಟು ಜನ ವೈದ್ಯರು ರೋಗಿಗಳ ಬಳಿ ಎಷ್ಟು ಸಮಯ ಇರುತ್ತಾರೆ? ನರ್ಸ್ ಗಳು ಎಷ್ಟು ಸಮಯ ಇರುತ್ತಾರೆ? ಸೋಂಕಿತರು ಎಂದು ತಿಳಿದ ಕೂಡಲೇ ಎಷ್ಟು ಜನ ದೂರ ನಿಲ್ಲಬಹುದು? ಮೂರು ದ್ವಾರದ ಆಚೆ ಇನ್‌ಸ್ಟ್ರಕ್ಷನ್ ನೀಡಿ ಹೋಗುವವರು ಎಷ್ಟು ಜನ? ಇಷ್ಟಕ್ಕೂ ಇಲ್ಲಿ ನರ್ಸ್‌ಗಳೆಲ್ಲರೂ  ಕೈತುಂಬಾ ಸಂಬಳ ತೆಗೆದುಕೊಳ್ಳುತ್ತಿರುವವರಲ್ಲ. ಕೇವಲ ಎಂಟು ಸಾವಿರಕ್ಕೆ ದುಡಿಯುವವರೂ ಸಹ ಇಲ್ಲಿ ಇದ್ದಾರೆ. 

ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಅವರ ಪ್ರಾಣವನ್ನು ಪಣಕ್ಕಿಟ್ಟು ದುಡಿಯುವ ನರ್ಸ್‌ಗಳಿಗೆ ಏಕವಚನದಿಂದ ಮಾತನಾಡುವುದರ
ಜೊತೆಗೆ ಪಿಪಿ ಕಿಟ್ ಗಳನ್ನು ಸರಿಯಾಗಿ ನೀಡದೇ ಅವರ ಆತ್ಮ ಬಲವನ್ನು ಕುಗ್ಗಿಸದಿರಿ. 

ದಯವಿಟ್ಟು ಇನ್ನು ಮುಂದೆಯಾದರೂ ಅವರ ಆತ್ಮಬಲವನ್ನು ಕುಗ್ಗಿಸದೇ ಅವರನ್ನು ಕಡೇ ಪಕ್ಷ ಸಾಮಾನ್ಯ ಮನುಷ್ಯರಂತೆ ಕಾಣಬಾರದೇ? ಇದೇ ನೀವು ನಮಗೆ ನೀಡುವ ಕೃತಜ್ಞತೆ ಎಂದು ನಾವು ಭಾವಿಸುತ್ತೇವೆ.

– ನೊಂದ ಶುಶ್ರೂಷಕಿಯರು.

error: Content is protected !!