ಪ್ರಜಾಪ್ರಭುತ್ವದ ಉಳಿವಿಗಾಗಿ ಸುಧಾರಣೆ ಅಗತ್ಯ

ಮಾನ್ಯರೇ,

ಭಾರತದಲ್ಲಿ ಪ್ರಜಾಪ್ರಭುತ್ವವು ಚುನಾವಣಾ ಕಾಲದಲ್ಲಿ ಮಾತ್ರ ಹೊರಬರುತ್ತದೆ. ನಂತರ ಬಾಗಿಲು ಹಾಕಿಕೊಳ್ಳುತ್ತದೆ. ಇದಕ್ಕೆ ಕಾರಣ ಹಣವುಳ್ಳವರೇ ಅಧಿಕಾರಕ್ಕೆ ಬರುವುದು. 

ಬಂದ ನಂತರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರದ ಏಕಸ್ವಾಮ್ಯತೆ ಯಿಂದ ಮೆರೆಯುವುದು, ಕೆಲ ಕುಟುಂಬಗಳು ಮಾತ್ರ ರಾಜಕೀಯ ಪಾರಮ್ಯ ಹೊಂದುವುದು. ಇದರಿಂದಾಗಿ ಯೋಗ್ಯರು, ಅರ್ಹರು ರಾಜಕೀಯದಿಂದ ದೂರ ಉಳಿಯುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇಂತಹ ಅವಸ್ಥೆಯಿಂದ ಭ್ರಷ್ಟಾಚಾರ ಹೆಚ್ಚಾಗಿ ಅದಕ್ಷತೆಯಿಂದ ಪ್ರಗತಿ ಕುಂಠಿತವಾಗುವುದು ಸರ್ವವೇದ್ಯ. ಈ ಪರಿ ಸ್ಥಿತಿಯಿಂದ ಹೊರಬರಲು ಸಂವಿಧಾನ, ಜನತಾ ಪ್ರಾತಿನಿಧಿಕ ಕಾಯ್ದೆಗೆ ತಿದ್ದುಪಡಿ ಮತ್ತು ಚುನಾವಣಾ ಸುಧಾರಣೆ ಪ್ರಸ್ತುತ ಅನಿವಾರ್ಯ.

ಭಾರತದ ಯಾವುದೇ ಚುನಾವಣೆಗಳಲ್ಲಿ ಒಬ್ಬ ವ್ಯಕ್ತಿ ಎರಡು ಬಾರಿ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಚುನಾವಣಾ ಸಂದರ್ಭದಲ್ಲಿ ಹಣದ ಹೊಳೆಯನ್ನು ನಿಲ್ಲಿಸಿ, ಭ್ರಷ್ಟಾಚಾರವನ್ನು ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸಲು ಸಾಧ್ಯ ಮತ್ತು ಅರ್ಹರು, ಯೋಗ್ಯರು ಚುನಾವಣೆಗಳಲ್ಲಿ ಹಣದ ಹರಿವಿಲ್ಲದೆ ಸ್ಪರ್ಧಿಸಿ ದಕ್ಷತೆಯನ್ನು ಹೆಚ್ಚಿಸಬಹುದಾಗಿದೆ. ಇಂತಹ ಬದಲಾವಣೆಗ ಳನ್ನು ತರುವಾಗ ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರತಿರೋಧ ಸಹಜ. ಬಹ ಳಷ್ಟು ಚುನಾವಣೆಗಳಲ್ಲಿ ಹಣದ ಹೊಳೆ ಹರಿಸಿ ಗೆದ್ದು ಬಂದವರು ಅವರ ಭ್ರಷ್ಟ ಅನುಭವ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಮುಂದಿಟ್ಟು ಮೊಂಡು ವಾದವನ್ನು ಮಂಡಿಸುತ್ತಾರೆ. ಇಂತಹವರ ಕುತರ್ಕವನ್ನು ಒಪ್ಪಬಾರದು.

ಭಾರತದಲ್ಲಿ 130 ಕೋಟಿ ಜನರಿದ್ದು ಅಪಾರವಾದ ಮಾನವ ಸಂಪನ್ಮೂಲವಿದೆ. ಅನೇಕ ಸಮರ್ಥ, ಯೋಗ್ಯ ವ್ಯಕ್ತಿಗಳು ಆಡಳಿತಕ್ಕೆ ಕಾಲಿಡಲು ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಭಾರತದ ನಾಗರಿಕರು ಯೋಚಿಸಿ ಜಾಗೃತರಾಗಬೇಕಾಗಿದೆ.


– ಶ್ರೀ ಬಸವ ಪ್ರಭು ಸ್ವಾಮೀಜಿ,
ಮಹಿಮಾ ಪಟೇಲ್,
ಶಿವನಕೆರೆ ಬಸವಲಿಂಗಪ್ಪ,
ಎಂ. ಸಿದ್ಧಯ್ಯ,
ದಾವಣಗೆರೆ.

error: Content is protected !!