ಮಾನ್ಯರೇ,
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕನ ಹಲ್ಲೆಯಿಂದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತಹ ವಿಷಯ. ಶಿಕ್ಷಕರಿಗೆ ಅನಾದಿ ಕಾಲದಿಂದಲೂ ಮಹತ್ತರವಾದ ಸ್ಥಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಕ್ಕಳನ್ನು ಅಸ್ಪೃಶ್ಯತಾ ಭಾವದಿಂದ ನೋಡುವುದು, ಮಾರಣಾಂತಿಕ ಹಲ್ಲೆ, ದುರ್ಬಳಕೆ ಸೇರಿದಂತೆ ಅನೇಕ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಮಕ್ಕಳಿಗೆ ಬೈದು, ತಿದ್ದಿ ಬುದ್ಧಿ ಹೇಳಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಇಂತಹ ಶಿಕ್ಷಕರು ತಮ್ಮ ಮನಸ್ಸನ್ನೇ ಅರಿಯದವರು ಇನ್ನೂ ಮಕ್ಕಳ ಮನಸ್ಸನ್ನು ಹೇಗೆ ಗೆಲ್ಲಲು ಸಾಧ್ಯ?
ಇಂತಹ ಹಲವಾರು ಪ್ರಕರಣಗಳಿಂದ ಪೋಷಕರು ಮಾನಸಿಕವಾಗಿ ಕುಗ್ಗಿರುವುದಂತೂ ನಿಜ. ರಾಜ್ಯ ಸರ್ಕಾರ ಶಾಲಾ ಶಿಕ್ಷಕರಿಗೆ ನೈತಿಕ ಶಿಕ್ಷಣದ ಜೊತೆಗೆ ಮಾನಸಿಕ ಬಲವನ್ನು ಹೆಚ್ಚಿಸುವಂತಹ, ಈಗಿನ ಕಾಲಕ್ಕೆ ತಕ್ಕಂತೆ, ವಿಶೇಷ ಶಿಕ್ಷಣ ನೀಡುವಂತಹ ಅಗತ್ಯವಿದೆ. ಜೊತೆಗೆ ಶಾಲಾ ಆಡಳಿತ ಮಂಡಳಿಯವರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಪೂರ್ವಾಪರ ವಿಚಾರಿಸಿ ನೇಮಕಾತಿ ಮಾಡಿಕೊಳ್ಳುವುದು ಒಳ್ಳೆಯದು.
– ಮುರುಗೇಶ ಡಿ, ದಾವಣಗೆರೆ.