ಮಾನ್ಯರೇ,
ಇತ್ತೀಚಿಗೆ ದಾವಣಗೆರೆ ಮಹಾನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣ ಪೂರ್ಣವಾಗಿ 3 ತಿಂಗಳು ಕಳೆದರೂ ಸೇವೆಗೆ ಇನ್ನೂ ಮುಕ್ತವಾಗಿಲ್ಲ. ವಿಧಾನಸಭಾ ಚುನಾವಣೆ ಮುಗಿದು ಬರುವ ವರ್ಷ ಲೋಕಸಭೆ ಚುನಾವಣೆಯನ್ನೂ ಜನತೆ ಎದುರು ನೋಡುತ್ತಿರುವಾಗ ಖಾಸಗಿ ಬಸ್ ನಿಲ್ದಾಣ ಸೇವೆಗೆ ಚಾಲನೆ ಏಕೆ ದೊರಕುತ್ತಿಲ್ಲ?
ದಾವಣಗೆರೆ ತಾಲ್ಲೂಕು ಆಡಳಿತ ಸೌಧಕ್ಕೆ (ತಹಶೀಲ್ದಾರ್ ಕಛೇರಿ ) ನೂತನ ಕಟ್ಟಡದ ನಿರ್ಮಾಣವಾದರೂ ಸೇವಾ ಆರಂಭಕ್ಕೆ ಇನ್ನು ಮೀನಾ- ಮೇಷದ ಕ್ಷಣ ಗಣನೆಯಲ್ಲೇ ಮುಳುಗಿದೆ. ಅಧಿಕಾರಿಗಳ ಕೃಪಾ ಕಟಾಕ್ಷ ಇನ್ನು ಇತ್ತ ಕಡೆ ಬೀರಿಲ್ಲ ಏಕೆ ?
ಮಹಾನಗರ ಪಾಲಿಕೆ ಎದುರಿನ ರೈಲ್ವೆ ಕೆಳಸೇತುವೆಯ ತೆಗ್ಗಿನಲ್ಲಿ ಮಳೆ ನೀರು ಸಂಗ್ರಹಗೊಂಡು ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆ ನೀರು ನಿಲ್ಲದಂತೆ, ತೆಗ್ಗಿಗೆ ಹರಿದು ಬಂದ ಮಳೆ ನೀರು ಚರಂಡಿಗೆ ಸರಾಗವಾಗಿ ನುಗ್ಗಿ ಹರಿಯುವಂತೆ ತಾಂತ್ರಿಕ ವ್ಯವಸ್ಥೆಯನ್ನು ಇನ್ನೂ ಸುಧಾರಿಸುವಲ್ಲಿ ತಂತ್ರಜ್ಞರು ಪ್ರಗತಿ ಕಾಣಬೇಕಾಗಿದೆ.
– ಜೆ .ಎಸ್. ಚಂದ್ರನಾಥ, ನೀಲಾನಹಳ್ಳಿ.