ಐ.ಎ.ಎಸ್‌ ಅಧಿಕಾರಿಗಳ ದುರ್ಬಳಕೆ ಖಂಡಿಸಿ ಕೇಂದ್ರಕ್ಕೆ ಪತ್ರ

ಮಾನ್ಯರೇ, 

ಕಾಂಗ್ರೆಸ್‌ ಪಕ್ಷವು ಇತ್ತೀಚೆಗೆ ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆಗೆ ಆಗಮಿಸಿದ್ದ ಗಣ್ಯರ ಆತಿಥ್ಯಕ್ಕೆ ಐ.ಎ.ಎಸ್‌. ಅಧಿಕಾರಿಗಳನ್ನು ನೇಮಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು ಹುರುಪಿನಲ್ಲಿರುವ ಹೊಸ ಸರ್ಕಾರದ ಇತ್ತೀಚಿನ ಅಪಸವ್ಯಗಳಲ್ಲೊಂದು. ಈ ಸಂಬಂಧ ಕಾಂಗ್ರೆಸ್‌ ವಿರೋಧ ಪಕ್ಷಗಳು ಮಾಡಿದ ಗದ್ದಲ, ಪ್ರತಿಭಟನೆ, ಅಮಾನತ್ತು ಮತ್ತು ಧರಣಿಗಳಿಂದಾಗಿ ವಿಧಾನಸಭಾ ಅಧಿವೇಶನವು ರಣರಂಗವಾಗಿ ಮಾರ್ಪಾಡುಗೊಂಡಿದ್ದು ನಾಚಿಗೆಗೇಡಿನ ಸಂಗತಿ. ಇದು ತೆರಿಗೆದಾರರ ಅಪಾರ ಹಣ ಮತ್ತು ಸದನದ ಅಮೂಲ್ಯ ಸಮಯದ ದುರುಪಯೋಗದಲ್ಲಿ ನಮ್ಮ ಶಾಸಕರು ತೊಡಗಿರುವುದರ ಮತ್ತೊಂದು ನಿದರ್ಶನವಾಗಿದೆ.

ಹಿಂದೆಯೂ ಈ ರೀತಿ ಮಾಡಲಾಗಿತ್ತು ಎಂಬ ಸಮಜಾಯಿಷಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೊಟ್ಟಿರುವುದು ಅಸಮರ್ಥನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐ.ಎ.ಎಸ್‌. ಅಧಿಕಾರಿಗಳು ಇರುವುದು ಜನತೆಗೆ ದಕ್ಷ, ಸ್ವಚ್ಛ ಆಡಳಿತ ನೀಡುವುದಕ್ಕೆ ಹೊರತು ರಾಜಕಾರಣಿಗಳ ಸೇವೆ ಮಾಡುವುದಕ್ಕಲ್ಲ. ಈ ರೀತಿ ಮಾಡುವುದು ಐ.ಎ.ಎಸ್‌. ನೀತಿ, ನಿಯಮಗಳ 5(1) ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನಿವೃತ್ತ ಐ.ಎ.ಎಸ್‌. ಅಧಿಕಾರಿ ಎಂ. ಮದನಗೋಪಾಲ್‌ ತೀವ್ರವಾಗಿ ಆಕ್ಷೇಪಿಸಿದ್ದಾರೆ. ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದವರೂ, ಅತ್ಯಂತ ದಕ್ಷ ಐ.ಎ.ಎಸ್‌. ಅಧಿಕಾರಿಗಳಲ್ಲೊಬ್ಬರೂ ಆಗಿರುವ ಅವರು ಈ ಕುರಿತು ಸೂಕ್ತ ವಿಚಾರಣೆ ಕೋರಿ ಕೇಂದ್ರದ ಸಂಪುಟ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ವರದಿಯಾಗಿದೆ.

ಐ.ಎ.ಎಸ್‌. ಅಧಿಕಾರಿಗಳ ಆತ್ಮ ಗೌರವವನ್ನು ಎತ್ತಿ ಹಿಡಿಯುವ ಮದನಗೋಪಾಲ್‌ ಅವರ ಈ ಕ್ರಮ ಅತ್ಯಂತ ಸ್ವಾಗತಾರ್ಹ. ಅವರ ಅಧಿಕೃತ ಕರ್ತವ್ಯಕ್ಕೆ ಸಂಬಂಧಿಸಿದ ಹಾಗೂ ಶುದ್ಧ ರಾಜಕೀಯವಾದ ಕಾರ್ಯಕ್ರಮ ರಾಜ್ಯದ ಗೌರವಾನ್ವಿತ ಐ.ಎ.ಎಸ್‌. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಸರ್ಕಾರದ ಈ ಕ್ರಮವು ಅತ್ಯಂತ ಖಂಡನೀಯ. 


– ಎಸ್‌.ಬಿ. ರಂಗನಾಥ್‌, ದಾವಣಗೆರೆ., ಮೊ : 94800 93958

error: Content is protected !!