ಮಾನ್ಯರೇ
`ಮನೆಗೆರಡು ಮರ ದಾವಣಗೆರೆಗೆ ವರ’ಎನ್ನುವ ಧ್ಯೇಯೋದ್ಧೇಶ ದೊಂದಿಗೆ ಕರುಣಾ ಟ್ರಸ್ಟ್ ಮತ್ತಿತರೆ ಸಂಘ ಸಂಸ್ಥೆಗಳ ವತಿಯಿಂದ ಈ ವರ್ಷ ಬಹಳ ಕಷ್ಟಪಟ್ಟು 3000 ಮರ ಗಿಡಗಳನ್ನು ಬೆಳೆಸುತ್ತಿದ್ದೇವೆ. ಪ್ರತಿವರ್ಷವೂ ಈ ಸತ್ಕಾರ್ಯ ಮಾಡುತ್ತಲೇ ಇದ್ದೇವೆ. ಇಂದಿನ ಮಕ್ಕಳೇ ನಾಳಿನ ಉತ್ತಮ ಪ್ರಜೆಗಳು ಎನ್ನುವಂತೆ, ಇಂದಿನ ಸಸಿಗಳು ನಾಳಿನ ಹೆಮ್ಮರಗಳಾಗುತ್ತವೆ. ಇಂದು ಮಕ್ಕಳನ್ನು ಉತ್ತಮ ರೀತಿಯಲ್ಲಿ ಪಾಲಿಸಿ ಪೋಷಿಸಿದರೆ ಅವರು ಮುಂದೆ ನಮ್ಮ ಮುಪ್ಪಿನ ಕಾಲದಲ್ಲಿ ನೆರವಾಗುತ್ತಾರೆ ಮತ್ತು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ನಿರ್ಮಾಣವಾಗುತ್ತಾರೆ. ಹಾಗೆಯೇ ಇಂದು ನಾವು ಉತ್ತಮ ರೀತಿಯಲ್ಲಿ ಸಸಿಗಳನ್ನು ಪೋಷಿಸಿ, ಬೆಳೆಸಿ ಮರಗಳನ್ನಾಗಿ ಮಾಡಿದರೆ ಮಾತ್ರ ನಮಗೂ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಆರೋಗ್ಯ ಬಿಟ್ಟು ಹೋಗಲು ಸಾಧ್ಯ.
ಆರೋಗ್ಯಕ್ಕೆ ಅಗತ್ಯವಾಗಿರುವ ಆಮ್ಲಜನಕವನ್ನು ಕೊಟ್ಟು, ಎಲ್ಲರ ಜೀವ ಉಳಿಸುವಂತಹ ಮರ, ಗಿಡಗಳನ್ನು ಕೇವಲ ಎಲೆ ಉದುರಿಸುತ್ತವೆ, ಕಾಂಪೌಂಡ್ ಒಡೆಯುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ರಾತ್ರೋ ರಾತ್ರಿ ಕಡಿದು ಹಾಕುತ್ತಿದ್ದಾರೆ. ಪುಟ್ಟ ಸಸಿಗಳನ್ನು, ಬಳ್ಳಿಗಳನ್ನು ಚಿವುಟಿ ಹಾಕುತ್ತಿದ್ದಾರೆ. ಗಿಡಗಳನ್ನು ಬೆಳೆಯುವ ಹಂತದಲ್ಲಿಯೇ ಹಾನಿಗೊಳಿಸುವುದು, ಬೆಳೆದು ನಿಂತಿರುವ ಮರಗಳಿಗೆ ಆಸಿಡ್ ಹಾಕುವುದು, ಕತ್ತರಿಸಿ ಹಾಕುವುದು, ಇದು ಅತ್ಯಂತ ವಿಷಾದನೀಯ. ಉತ್ತಮ ಪರಿಸರದ ಅರಿವುಳ್ಳ ನಾಗರಿಕರೇ ಈ ದುಷ್ಕೃತ್ಯವೆಸಗಿದರೆ ಇನ್ಯಾರಿಗೆ ದೂರಬೇಕು?
ಮಕ್ಕಳಂತೆ ಗಿಡಗಳನ್ನು ಅತ್ಯಂತ ಜತನದಿಂದ ಕಾಪಾಡಬೇಕು. ಮರ ಕಡಿಯುವುದನ್ನು ಖಂಡಿಸಬೇಕು. ಶಿಶು ಹತ್ಯೆ ಮಹಾಪಾಪ ಎಂಬುದು ಎಷ್ಟು ಸತ್ಯವೋ, ಸಸಿ ಹತ್ಯೆಯೂ ಅಷ್ಟೇ ಪಾಪ. ಶಿಶು ಹತ್ಯೆಯನ್ನು ಸರ್ವರೂ ಖಂಡಿಸುವಂತೆ, ಸಸಿ ಹತ್ಯೆಯನ್ನು ಏಕೆ ಖಂಡಿಸುವುದಿಲ್ಲ? ನಮ್ಮ ಮಕ್ಕಳು ಎಷ್ಟೇ ಕಷ್ಟ ಕೊಟ್ಟರು ಅದನ್ನು ಸಹಿಸಿಕೊಂಡು ಪ್ರೀತಿಯಿಂದ ಬೆಳೆಸುತ್ತೇವೆ. ಆದರೆ ನಮ್ಮಿಂದ ಯಾವುದೇ ಪ್ರತಿಫಲಾಪೇಕ್ಷೆ ಪಡೆಯದೆ ಜೀವಾಮೃತವಾದ ಆಕ್ಸಿಜನ್ ಕೊಡುವ ಮರಗಳನ್ನು ಕಡಿಯದಿರಲು ಮನವಿ.
– ಪರಿಸರ ಜಾಗೃತಿ ಸಮುದಾಯದ ಪರವಾಗಿ ವಸಂತ್, ಡಾ. ಶಶಿಧರ್ ತವಣೆ, ಡಾ.ಬಿ.ಎಂ.ವಿಶ್ವನಾಥ್, ಸಿ.ಜಿ.ದಿನೇಶ್, ಕೊಟ್ರೇಶ್ವರ್, ಶಿವನಕೆರೆ ಬಸವಲಿಂಗಪ್ಪ, ಭರಮಪ್ಪ.