ಮಾನ್ಯರೇ,
2023ರ 51ನೇ ವರ್ಷದ ವಿಶ್ವ ಪರಿಸರ ದಿನಾಚರಣೆಯಲ್ಲಿ “ಪ್ಲಾಸ್ಟಿಕ್ ಮಾಲಿನ್ಯ ಮೆಟ್ಟಿ ನಿಲ್ಲೋಣ”ಎಂಬ ಧ್ಯೇಯ ವಾಕ್ಯ ದೊಂದಿಗೆ ಆಚರಿಸಲಾಗಿದೆ. ಅದಕ್ಕೆ ಪೂರಕವಾಗಿ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾರವರು, ಪ್ಲಾಸ್ಟಿಕ್ ವಸ್ತುಗಳ ಸಂಗ್ರಹಣೆ, ಸಾಗಾಣಿಕೆ ಮಾರಾಟ ನಿಷೇಧಿಸಲಾಗಿದೆ ಎಂದು ಆಜ್ಞೆ ಹೊರಡಿಸಿರುವುದು ಜನತಾವಾಣಿ ಮತ್ತಿತರೆ ದಿನಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕ್ರಮವನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ.
ದಾವಣಗೆರೆಯ ಕರುಣಾ ಟ್ರಸ್ಟ್ ಮತ್ತಿತರೆ ಪರಿಸರ ಜಾಗೃತಿ ಸಮುದಾಯಗಳು ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು, ಜಾಗೃತಿ, ಹೋರಾಟ ಮಾಡುತ್ತಾ ಬಂದಿದ್ದಾರೆ. ಪ್ಲಾಸ್ಟಿಕ್ ಉಪಯೋಗದಿಂದ ದನಕರುಗಳು ಆಹಾರ ಸೇವನೆ ಜೊತೆಗೆ ಪ್ಲಾಸ್ಟಿಕ್ ಸೇವಿಸಿ ಜೀವಹಾನಿ ಮಾಡಿಕೊಳ್ಳುತ್ತಿವೆ. ಅಲ್ಲದೆ ಜನರು ತಮ್ಮ ಉಪಹಾರ, ಊಟ ಪ್ಲಾಸ್ಟಿಕ್ ಚೀಲದಲ್ಲಿಯೇ ತಂದು ತಿನ್ನುವುದರಿಂದ ಕ್ಯಾನ್ಸರ್ ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ಅಂಗಡಿಗಳಲ್ಲಿ ಪ್ರತಿಯೊಂದು ಸಾಮಾನು ಖರೀದಿಸುವಾಗಲು ಪ್ಲಾಸ್ಟಿಕ್ ಚೀಲ ಕೊಡುವುದರಿಂದ ಕಸದ ಸಮಸ್ಯೆ ಆಗಿದೆ. ಎಲ್ಲೆಡೆ ಪ್ಲಾಸ್ಟಿಕ್ ಚೆಲ್ಲಿರುವುದರಿಂದ ಭೂಮಿಯು ಸಹ ಪ್ಲಾಸ್ಟಿಕ್ ಮಯವಾಗಿದೆ. ಅಲ್ಲದೆ ಪ್ಲಾಸ್ಟಿಕ್, ಕಸ ಕಡ್ಡಿಗಳಂತೆ ಭೂಮಿಯಲ್ಲಿ ಕರಗದೆ ಹಾಗೆಯೇ ಉಳಿಯುತ್ತದೆ.
ಪ್ಲಾಸ್ಟಿಕ್ ನಿಷೇಧ ಸಂತೋಷದಾಯಕವಾಗಿದ್ದರೂ ಇದು ಕಾರ್ಯಗತವಾಗಲು ಆದೇಶದಿಂದ ಮಾತ್ರ ಸಾಧ್ಯವಿಲ್ಲ. ಆಡಳಿತಾಧಿಕಾರಿಗಳು ಬದ್ಧರಾಗಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಸಾರ್ವಜನಿಕರು ಮಾರುಕಟ್ಟೆಗಳಿಗೆ ಹೋಗುವಾಗ ಬಟ್ಟೆ ಚೀಲಗಳನ್ನು ತೆಗೆದುಕೊಂಡು ಹೋಗಿ ಸಹಕರಿಸಬೇಕು.
ಪ್ರಸ್ತುತ ನಾವು ಆರು ಲಕ್ಷ ಜನರು ಕಸ ಎಲ್ಲೆಂದರಲ್ಲಿ ಎಸೆಯದೇ ಪರಿಸರ ರಕ್ಷಣೆ ಜವಾಬ್ದಾರಿ ವಹಿಸಿಕೊಂಡು, ನಮ್ಮ ನಮ್ಮ ಕಸವನ್ನು ಪರಿಸರಕ್ಕೆ ಹಾನಿಯಾಗದಂತೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡೋಣವೇ? ಅಥವಾ ನಗರ ಪಾಲಿಕೆಗೆ ಸಹಕರಿಸುವುದರೊಂದಿಗೆ ದಾವಣಗೆರೆ ನಗರವನ್ನು ಸ್ವಚ್ಛವಾಗಿಡಿಸಿ, ಕರ್ನಾಟಕದಲ್ಲೇ ಮಾದರಿ ಮತ್ತು ಸುಂದರ ನಗರವನ್ನಾಗಿಸೋಣವೇ ?
– ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.