ಮಾನ್ಯರೇ,
ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕರು ಮಾತ್ರ ನಿತ್ಯ ಹೈರಾಣಾಗುತ್ತಿದ್ದಾರೆ.
ಉಚಿತ ಪ್ರಯಾಣ ಎಂಬ ಕಾರಣದಿಂದ ಮಹಿಳೆಯರು ಪ್ರತಿನಿತ್ಯ ಗುಂಪು ಗುಂಪಾಗಿ ಹೊರಗೆ ಬರುತ್ತಿರುವುದರಿಂದ, ದಿನನಿತ್ಯ ಅಡ್ಡಾಡುವ ಉದ್ಯೋಗಿಗಳು, ವಯೋವೃದ್ದರು, ವಿದ್ಯಾರ್ಥಿಗಳಿಗೂ ಕೂಡ ಬಸ್ ಇಲ್ಲದಂತಾಗಿ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಬಸ್ ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವುದರಿಂದ, ಕಂಡಕ್ಟರ್‌ಗಳಿಗೂ ಕೂಡ ಒತ್ತಡ ಹೆಚ್ಚಾಗುತ್ತಿದೆ. ಅಲ್ಲಲ್ಲಿ ಪ್ರಯಾಣಿಕರ ಸಾವು-ನೋವುಗಳು ಕೂಡ ಉಂಟಾಗಿವೆ.
ಕ್ಷುಲ್ಲಕ ಕಾರಣಗಳ ನೆಪವೊಡ್ಡಿ, ಪ್ರಯಾಣಿಕರುಗಳು ಕಂಡಕ್ಟರ್ ಗಳ ಜೊತೆ ಜಗಳಕ್ಕೆ ಇಳಿಯುತ್ತಾರೆ, ನಿನ್ನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸಮೀಪ ಕಂಡಕ್ಟರ್ ಮೇಲೆಯೇ ಪ್ರಯಾಣಿಕರೊಬ್ಬರು ಹಲ್ಲೆ ಮಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು ನಿಜಕ್ಕೂ ಇದು ಅಮಾನವೀಯ ಎನಿಸಿತು.
ಇಂತಹ ಅಹಿತಕರ ಘಟನೆಗಳು ರಾಜ್ಯದಾದ್ಯಂತ ಪ್ರತಿ ನಿತ್ಯ ನಡೆಯುತ್ತಲೇ ಇವೆ. ರಾಜ್ಯ ಸರ್ಕಾರವೇನೋ ಉಚಿತ ಪ್ರಯಾಣದ ಯೋಜನೆ ತಂದಿದೆ, ಇದರಿಂದ ಕಂಡಕ್ಟರ್ ಗಳ ಗೋಳು ಹೇಳುತೀರದು. ತಮ್ಮ ಕುಟುಂಬವನ್ನು ವಾರಗಟ್ಟಲೇ ತೊರೆದು ಎಂತಹ ಕಷ್ಟಕರ ಸನ್ನಿವೇಶದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ದಯವಿಟ್ಟು ರಾಜ್ಯ ಸರ್ಕಾರ ಇದಕ್ಕೊಂದು ಪರಿಹಾರ ದೊರಕಿಸಿಕೊಡುವ ಮೂಲಕ ಬಸ್ ಕಂಡಕ್ಟರ್ ಗಳ ಹಿತ ಕಾಯಬೇಕಾಗಿದೆ.
– ಮುರುಗೇಶ ಡಿ., ಹವ್ಯಾಸಿ ಬರಹಗಾರರು, ದಾವಣಗೆರೆ.