ಮಾನ್ಯರೇ,
ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಲ್ಲೊಂದಾದ ಶಕ್ತಿ ಯೋಜನೆ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ರಾಜ್ಯದಾದ್ಯಂತ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆಯೂ ಕೂಡ ವ್ಯಕ್ತವಾಗಿದೆ.
ಕಳೆದ ಸೋಮವಾರ ಅನ್ಯ ಕೆಲಸದ ನಿಮಿತ್ತ ಕೆಲಸ ಮುಗಿಸಿಕೊಂಡು ಶಿವಮೊಗ್ಗದಿಂದ ದಾವಣಗೆರೆಗೆ ಮರಳಲೆಂದು ಬಸ್ ನಿಲ್ದಾಣಕ್ಕೆ ತೆರಳಿದಾಗ ಬಸ್ ತುಂಬಾ ಬಹುತೇಕ ಮಹಿಳೆಯರೇ ತುಂಬಿದ್ದರು, ಕೂರಲು ಸಹ ಸೀಟುಗಳಿಲ್ಲದೆ, ನಾನು ಸೇರಿದಂತೆ ಎಷ್ಟೋ ಮಂದಿ ಹೊನ್ನಾಳಿಯವರೆಗೂ ನಿಂತುಕೊಂಡೆ ಪ್ರಯಾಣಿಸಿದೆವು.
ಈ ಬಗ್ಗೆ ಕಂಡಕ್ಟರ್ ಗೆ ಏನ್ ಸರ್ ಇದು, ಸರ್ಕಾರ ಮಹಿಳೆಯರಿಗೆ 50% ಸೀಟು ಮೀಸಲು ಎಂದಿದೆ, ಬಸ್ ತುಂಬಾ ಮಹಿಳೆಯರೇ ಇದ್ದಾರಲ್ಲ ಎಂಬ ಪ್ರಶ್ನೆಗೆ, ಉತ್ತರವಾಗಿ, ಏನ್ ಮಾಡೋದು ಸರ್ ಉಚಿತ ಯೋಜನೆಯ ಎಫೆಕ್ಟ್ ಎಂದರು.
ಇನ್ನೂ 50% ಸೀಟು ಮೀಸಲು ಎಂದಿದ್ದಕ್ಕೆ, ಬಸ್ ಹತ್ತಿದವರನ್ನು ಹೇಗೆ ಇಳಿಸೋಕಾಗುತ್ತೆ ಎನ್ನುವ ಅಸಹಾಯಕತೆ ವ್ಯಕ್ತಪಡಿಸಿದರು. ನನ್ನ ಜೊತೆಗೆ ಇದ್ದ ಸಹ ಪ್ರಯಾಣಿಕರೊಬ್ಬರು, ಮಣಿಪಾಲ್‌ನಿಂದ ಶಿವಮೊಗ್ಗದವರೆಗೂ ನಿಂತುಕೊಂಡೆ ಬಂದಿದೀನಿ ಸರ್, ಆ ಬಸ್‌ನಲ್ಲೂ ಬಹುತೇಕ ಮಹಿಳೆಯರೇ ತುಂಬಿದ್ದರು ಎಂದರು. ಉಚಿತ ಬಸ್ ಪ್ರಯಾಣದ ಪರಿಣಾಮ ಹೆಚ್ಚಾಗಿ ಹೊರಗೆ ಬಾರದ ಮಹಿಳೆಯರೆಲ್ಲರೂ ಕೂಡ ಇಂದು ಗುಂಪು ಗುಂಪಾಗಿ ಹೊರಗೆ ಬರುತ್ತಿದ್ದಾರೆ. ಇದರಿಂದ ದಿನಂಪ್ರತಿ ಕೆಲಸ ಮಾಡುವ ಕಂಡಕ್ಟರ್ ಗಳಿಗೂ ಒತ್ತಡ. ಅತಿಯಾದರೆ ಅಮೃತವೂ ವಿಷವೇ. ಸರ್ಕಾರ ಸೂಕ್ತ ನಿಯಮಾವಳಿಗಳ ಮೂಲಕ ಇನ್ನು ಮುಂದೆಯಾದರೂ, ಪುರುಷರಿಗೂ ಸಹ, ಸೀಟಿನಲ್ಲಿ ಕಟ್ಟು ನಿಟ್ಟಾಗಿ ಮೀಸಲು ದೊರಕಿಸಿ ಕೊಡಬೇಕು.
– ಮುರುಗೇಶ ಡಿ., ದಾವಣಗೆರೆ.