ಅಲಂಕಾರಿಕ ಬದಲು ನೆರಳು ಕೊಡುವಂತಹ ಮರಗಳನ್ನು ಬೆಳೆಸಿ

ಮಾನ್ಯರೇ,

ರಾಜ್ಯದಲ್ಲಿ ಅತಿ ಹೆಚ್ಚಾಗಿ  ಚರ್ಚೆಯಾ ಗುತ್ತಿರುವ ವಿಷಯವೇನೆಂದರೆ, ಒಂದು ಚುನಾ ವಣೆ ಮತ್ತೊಂದು ಬೇಸಿಗೆಯ ರಣಬಿಸಿಲು. ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಇಂತಹ ರಣ ಬಿಸಿಲನ್ನು ಈಗಲೇ ಕಂಡಿದ್ದು. ಇದಕ್ಕೆ  ದಾವಣಗೆರೆಯೂ ಕೂಡ ಹೊರತಾಗಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿಯವರೆಗೆ ನೆರಳು ಕೊಡುವ ಸಾವಿರಾರು ಮರಗಳನ್ನು ಕಡಿದಿರುವು ದಂತೂ ನಿಜ. ಆದರೆ  ಕಡಿದಿರುವ ಮರಗಳ ಸ್ಥಾನವನ್ನು ಈವರೆಗೂ, ಯಾವ ಜನಪ್ರತಿನಿಧಿ ಗಳಿಂದಲೂ ತುಂಬಲು ಸಾಧ್ಯವಾಗಿಲ್ಲ.

ಪಂಪಾಪತಿಯವರ ಕಾಲದಲ್ಲಿ ಏಕಕಾಲಕ್ಕೆ 3 ಸಾವಿರಕ್ಕೂ ಅಧಿಕ ಮಂಕಿ ಪಾಡ್ ಅಥವಾ ರೈನ್ ಟ್ರಿ ಹೆಸರಿನ ಗಿಡಗಳನ್ನು ನೆಟ್ಟಿರುವುದು ಈಗ ಇತಿಹಾಸ. ಈಗ ನಗರದಲ್ಲೆಡೆ ಅದೇ ಮರಗಳು ತಂಪು ನೆರಳು ನೀಡುತ್ತಿರುವ ಜೊತೆಗೆ ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ. ನಗರದ ಸೌಂದರ್ಯೀಕರಣ ದಲ್ಲಿ ಗಿಡ, ಮರಗಳ ಪಾತ್ರವೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಪಂಪಾಪತಿಯವರಿಗಿದ್ದ ಪರಿಸರ ಕಾಳಜಿ ಈಗಿನ ಯಾವುದೇ ಜನಪ್ರತಿನಿಧಿಗೂ ಗುಲಗಂಜಿಯಷ್ಟೂ ಇಲ್ಲ. ಇಂದು ಅವರು ನಮ್ಮೊಟ್ಟಿಗೆ ಇಲ್ಲದಿರಬಹುದು, ಆದರೆ ಮಾಡಿದ ಕೆಲಸ ಇಂದಿಗೂ ಕೂಡ ಜನಮಾನಸದಲ್ಲಿ ಉಳಿಯುವಂತಾಗಿದೆ. 

ಮಹಾನಗರ ಪಾಲಿಕೆಯವರು  ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಲಂಕಾರಿಕ ಗಿಡಗಳನ್ನು ನೆಟ್ಟು, ನಮ್ಮ ತೆರಿಗೆ ಹಣವನ್ನು ವ್ಯರ್ಥ ಮಾಡಿದರೇ ವಿನಃ, ಇಲ್ಲಿಯವರೆಗೂ ನೆಟ್ಟಿರುವ ಯಾವೊಂದು ಗಿಡಗಳು ಮರಗಳಾಗಿ ನೆರಳು ನೀಡುತ್ತಿಲ್ಲ ಎಂಬುದೇ ದುರಂತ. ನಮ್ಮ ನಗರದ ಪರಿಸ್ಥಿತಿ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತಾಗಿದೆ. ನಗರದ  ಎತ್ತ ಕಣ್ಣು ಹಾಯಿಸಿದರೂ ಕಾಂಕ್ರೀಟ್ ರಸ್ತೆ, ಭೂಮಿಯೊಳಗೆ ನೀರು ಇಂಗಲು ಹೇಗೆ  ತಾನೇ ಸಾಧ್ಯ? ಬಿಸಿಲಿನ ತಾಪದಿಂದ ಇಡೀ ನಗರವೇ ಕಾದ ಕಾವಲಿಯಂತಾಗಿದೆ. ಮುಂದೆ ಬರುವಂತಹ ಜನಪ್ರತಿನಿಧಿಗಳಾದರೂ ನಗರದ ಬಗ್ಗೆ ಕಾಳಜಿ ವಹಿಸಿ ನೆರಳು ಕೊಡುವಂತಹ ಗಿಡಗಳನ್ನೇ ಹಾಕಿ. 

ಬಿಸಿಲಿನಿಂದ ಬಸವಳಿಯುತ್ತಿರುವ ಜನತೆಗೆ ತಂಪು ನೀಡುವಂತಹ ಕೆಲಸ ಮಾಡಬೇಕಾಗಿದೆ.


– ಮುರುಗೇಶ ಡಿ., ದಾವಣಗೆರೆ.

error: Content is protected !!