ಮಾನ್ಯರೇ,
ಕಾಂಗ್ರೆಸ್ ಪಕ್ಷವು ಮತದಾರರಿಗೆ ನೀಡಿದ್ದ ಗ್ಯಾರಂಟಿ ಯೋಜನೆಗಳಿಂದಲೋ ಅಥವಾ ಬಿಜೆಪಿಯ ಆಡಳಿತ ವಿರೋಧಿ ಅಲೆ ಯಿಂದಲೋ, ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ, ಅದಕ್ಕಾಗಿಯೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ರಾಜ್ಯದ ಜನತೆ ಈ ತಿಂಗಳಿನಿಂದಲೇ ಕರೆಂಟ್ ಬಿಲ್ ಕಟ್ಟುವುದಿಲ್ಲ, ಬೇಕಾದರೆ ಸರ್ಕಾರವನ್ನೇ ಕೇಳಿಕೊಳ್ಳಿ ಎನ್ನುತ್ತಿ ರುವ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ಬೆಲೆಯೇರಿಕೆಯ ಬೇಗೆಯಿಂದ ಬೇಯುತ್ತಿದ್ದ ರಾಜ್ಯದ ಜನತೆಗೆ, ಕಾಂಗ್ರೆಸ್ ಪಕ್ಷವು ನೀಡಿದ ಗ್ಯಾರಂಟಿ ಯೋಜನೆಗಳು, ರಾಜ್ಯದ ಜನತೆಯ ಮನ ತಂಪೆರೆಯುವಂತೆ ಮಾಡಿದೆ. ಈಗ ಎಲ್ಲೆಡೆ ಅದೇ ಚರ್ಚೆಗಳು, ನಿದ್ದೆಯಲ್ಲೂ ಕೂಡ ಕನವರಿಸುವಂತಾಗಿದೆ. ಮತದಾರರ ಮನ ಗೆಲ್ಲುವಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಸರ್ಕಾರ ರಚನೆಯಾದ ಕೂಡಲೇ ತಡ ಮಾಡದೆ, ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಶೀಘ್ರವೇ ಜಾರಿಗೆ ತರುವುದರ ಮೂಲಕ ರಾಜ್ಯದ ಮತದಾರರ ಋಣವನ್ನು ತೀರಿಸುವಂತಹ ಕೆಲಸ ಮಾಡಬೇಕಾಗಿದೆ.
– ಮುರುಗೇಶ ಡಿ., ದಾವಣಗೆರೆ.