ಮತದಾನ, ಮತಬೇಟೆ ಶಬ್ಧಗಳ ಉಪಯೋಗ ಸರಿಯೇ ?

ಮಾನ್ಯರೇ,

ಇಂಗ್ಲಿಷ್‌ನಲ್ಲಿ `Vote’ ಎನ್ನುವ ಪದಕ್ಕೆ ಕನ್ನಡದಲ್ಲಿ ಮತದಾನ ಎಂದು ಹೇಳುವ ಪರಿಪಾಠ ಬಂದಿದೆ. ಮತದಾನ ಎಂದರೆ, ದಾನವನ್ನು ನೀಡಬಹುದು ಅಥವ ಬಿಡಬಹುದು. ಆದರೆ ಮತ ಚಲಾಯಿಸಬೇಕಾದದ್ದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ. ಹಕ್ಕುಗಳನ್ನು ಕೇಳುವ ನಾವು ಕರ್ತವ್ಯಗಳನ್ನು ತಪ್ಪಬಾರದಲ್ಲವೇ? ಏಕೆಂದರೆ ಐದು ವರ್ಷಗಳ ಕಾಲ ಆಡಳಿತ ಮಾಡುವವರನ್ನು ಆರಿಸುವ ಗುರುತರ ಜವಬ್ದಾರಿ ನಮ್ಮೆಲ್ಲರದಾಗಿರುವಾಗ ಮತ ದಾನವೆಂದು ಸುಮ್ಮನೆ ಮನೆಯಲ್ಲಿ ಕುಳಿತರೆ ಪ್ರಜಾಪ್ರಭುತ್ವಕ್ಕೆ ಇದು ದೊಡ್ಡ ಧಕ್ಕೆ.

ಆಸ್ಟ್ರೇಲಿಯಾ, ಸಿಂಗಾಪುರ, ಸ್ವಿಡ್ಜರ್ ಲ್ಯಾಂಡ್ ದೇಶಗಳಲ್ಲಿ ಮತದಾರರು ಮತವನ್ನು ಚಲಾಯಿಸದಿದ್ದಲ್ಲಿ, ಮತವನ್ನು ಏತಕ್ಕಾಗಿ ಚಲಾಯಿಸಲಿಲ್ಲವೆಂದು ಕೋರ್ಟ್‌ಗೆ ಹೋಗಿ ವಿವರಿಸಬೇಕಾದ ಕಾಯಿದೆ ಇದೆ. ಸರಿಯಾದ ಕಾರಣವಿಲ್ಲದೆ ಮತ ಚಲಾಯಿಸದಿದ್ದರೆ, ನಾಗರೀಕತ್ವವನ್ನುವನ್ನು ಅನರ್ಹಗೊಳಿಸುವ ಅಧಿಕಾರ ಆ ದೇಶದ ಸಂವಿಧಾನಕ್ಕಿದೆ. ಅಂತಹ ಕಾಯಿದೆ ನಮ್ಮಲ್ಲಿಯೂ ಬರಬೇಕಿದೆ. 

 ಮೀಡಿಯಾದವರು ರಾಜಕಾರಣಿಗಳು ಮತಬೇಟೆಗೆ ಬರುತ್ತಾರೆ ಎಂದು ಹೇಳುತ್ತಾರೆ. ಬೇಟೆ ಎನ್ನುವ ಪದ ಸಮಂಜಸವಲ್ಲ. ಆಗ ರಾಜಕಾರಣಿಗಳು ಬೇಟೆಗಾರರು, ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾದ ನಾವು ಪ್ರಾಣಿಗಳೆಂದಾಗುತ್ತದೆ. ಇದು ಸರಿಯೇ?

ಪ್ರಸ್ತುತ ಚುನಾವಣೆಯಲ್ಲಿ ಚುನಾವಣೆಗೆ ಅಭ್ಯರ್ಥಿಗಳು 10 ಕೋಟೆ, 20 ಕೋಟಿ, 30 ಕೋಟಿ ಖರ್ಚು ಮಾಡಿದ್ದಾರೆ ಎಂಬ ವದಂತಿಗಳು ಬಂದಿವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಆಮಿಷಗಳನ್ನು ಒಡ್ಡುವುದು ಶಿಕ್ಷಾರ್ಹ ಅಪರಾಧ.  ಪ್ರಜಾಪ್ರಭುತ್ವ ಮತ್ತು ಸಂವಿಧಾನದಂತೆ ನಡೆದುಕೊಳ್ಳುವುದು ನಾವೇ ಸೃಷ್ಟಿಸಿಕೊಂಡ ಒಂದು ಅತ್ಯುತ್ತಮ ವ್ಯವಸ್ಥೆ. ಅದನ್ನು ಉಳಿಸಿ, ಬೆಳೆಸೋಣ.


– ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.

error: Content is protected !!