ಸ್ವಯಂ ಪ್ರೇರಿತರಾಗಿ ಮತದಾನ ಮಾಡದೇ ಇರುವವರಿಗೆ ಒಂದು ದಂಡ ಅಂತ ಆಗಬೇಕು

ಓದುಗರ ಪತ್ರಕ್ಕೆ ಪ್ರತಿಕ್ರಿಯೆ

ಇದು ಅನಿವಾರ್ಯವೇ ?

ಮಹಿಮಾ ಪಾಟೀಲ್. ಮಾಜಿ ಶಾಸಕರು,  ಎಂ ಸಿದ್ದಯ್ಯ ವಕೀಲರು, ಅನಿಸ್‌ ಬಾಷಾ . ವಕೀಲರು,  ಶಿವನಕೆರೆ ಬಸವಲಿಂಗಪ್ಪನವರು ಸಮಾಜ ಸೇವಕರು, ಅವರುಗಳು ಮೇ 4ರ ಗುರುವಾರದ `ಜನತಾವಾಣಿ’ಯ ಓದುಗರ ವಿಭಾಗದಲ್ಲಿ, ಬರೆದ `ಚುನಾವಣೆಯೋ ?  ಯುದ್ಧವೋ ?’  ಎಂಬ ಲೇಖನ ಸಮಯೋಚಿತವಾಗಿತ್ತು.

ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಚುನಾವಣೆಯನ್ನು ಎದುರಿಸುತ್ತಿರುವ ಅಸಂಖ್ಯಾತ ಅಭ್ಯರ್ಥಿಗಳನ್ನು ಮತ್ತು ಅವರು ಮಾಡುತ್ತಿರುವ ಅಬ್ಬರದ ಪ್ರಚಾರದ ವೈಖರಿಯನ್ನು ನೋಡಿ, ಇವರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ಜಿಜ್ಞಾಸೆ ಜನತೆಗೆ ಕಾಡುತ್ತಿರುವುದಂತೂ ನಿಜ. ಏಕೆಂದರೆ ಇವರಲ್ಲಿ ಯಾರೇ ಆಯ್ಕೆಯಾದರೂ, ಇಷ್ಟು ಹಣ ಖರ್ಚು ಮಾಡಿ ನಿಸ್ವಾರ್ಥವಾಗಿ, ಪ್ರಾಮಾಣಿಕವಾಗಿ ಜನಸೇವೆ.  ಮಾಡಲು ಸಾಧ್ಯವೇ  ? ಎಂಬ ಪ್ರಶ್ನೆ ಕಾಡುತ್ತಿರುವುದಂತೂ ನಿಜ.

ಪಕ್ಷಗಳ ನಾಯಕರ ಮತ್ತು ಹೈಕಮಾಂಡ್‌ನಿಂದ ಟಿಕೆಟ್ ಗಿಟ್ಟಿಸಿ ಕೊಂಡಾಗಿನಿಂದ ಶುರುವಾಗುತ್ತದೆ ಹಣದ ಖರ್ಚು, ಕರಪತ್ರಗಳನ್ನು ಮುದ್ರಿಸುವುದು, ಅಸಂಖ್ಯಾತ ಕಾರ್ಯಕರ್ತರನ್ನು (ಇವರಲ್ಲಿ ಬಹಳಷ್ಟು ಜನರಿಗೆ ದಿನಕ್ಕೆ ಇಷ್ಟು ಅಂತ ದರ ನಿಗದಿ ಮಾಡಿರುತ್ತಾರೆ. ಇದು ತಪ್ಪು ಅಂತ ಹೇಳುವುದಕ್ಕೆ ಆಗುವುದಿಲ್ಲ ಯಾಕೆಂದರೆ ಇಂದಿನ ಎಲ್ಲಾ ದುಬಾರಿ ಜೀವನದಲ್ಲಿ ತಮ್ಮ ಕೆಲಸ, ಕಾರ್ಯಗಳನ್ನು ಬಿಟ್ಟು ಬರುವುದಕ್ಕೆ ಆಗುವುದಿಲ್ಲ) ಬಳಸಿಕೊಳ್ಳುವುದರ ಖರ್ಚು, ಚುನಾವಣೆ ಪ್ರಚಾರಕ್ಕೆ ಅಂತ ಬರುವ ನಾಯಕರ ಊಟ, ವಸತಿ ವಗೈರೆ ಖರ್ಚು, ಮತದಾರ ರನ್ನು ಸೆಳೆಯಲು ಆಮಿಷದ ಖರ್ಚು, ಹಾಗೂ ಹೀಗೂ ಪ್ರಚಾರ ಮುಗಿಸಿ ದರೆ, ಮತದಾನದ ಅಂದಿನ ಪ್ರತಿ ಮತಗಟ್ಟೆಯ ಬೂತ್‌ನ ಖರ್ಚು ಮತದಾನದ ಹಿಂದಿನ ದಿನದ ಖರ್ಚು, ಗೆದ್ದರೆ ನಂತರದ ಖರ್ಚು ಹೀಗೆ ಹೇಳುತ್ತಾ ಹೋದರೆ ಒಂದೇ ಎರಡೇ..

ಮೊದಲಿನ ಚುನಾವಣೆಗಳು ಹೀಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬರುಬರುತ್ತಾ ಅಸಂಖ್ಯಾತ ಕೋಟಿಗಳಲ್ಲಿ ಚುನಾವಣೆಗಳು ನಡೆಯುತ್ತಿರುವುದಂತೂ ಸತ್ಯ. 

ಮೊದಲು ಬ್ಯಾನರ್, ಕಟೌಟ್, ಬಂಟಿಂಗ್ಸ್ ಅಂತ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀದ್ದರು, ಈಗ ಇದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಅದೇ ರೀತಿ , ಹೀಗೆ ನಾನಾ ತರಹದ ಖರ್ಚುಗಳನ್ನು ತಡೆಯಬಹುದಲ್ಲವೇ…

ಇದಕ್ಕೆ ಪರಿಹಾರ ಎಂದು ನನಗೆ ಒಂದು ವೈಯಕ್ತಿಕ ಯೋಚನೆ ಮೂಡಿದೆ. ಇದು, ಎಷ್ಟರ ಮಟ್ಟಿಗೆ ಸರಿ, ತಪ್ಪು ಗೊತ್ತಿಲ್ಲ. ಇದರ, ಸಾಧಕ – ಬಾಧಕಗಳು ಗೊತ್ತಿಲ್ಲ . ಅದು ಏನೆಂದರೆ.., ಇಂದಿನ ಪ್ರಧಾನಿ ಮೋದಿಯವರು ಎಲ್ಲದಕ್ಕೂ ಆಧಾರ್ ಕಾರ್ಡ್ ಜೋಡಣೆ ಮಾಡಿದಂತೆ, ಅದೇ ತರಹ ಮತದಾರರ ಪಟ್ಟಿಗೆ ಜೋಡಣೆ ಮಾಡಿದರೆ, ಪ್ರತಿ ಜನಸಾಮಾನ್ಯರು ಸ್ವಯಂ ಪ್ರೇರಿತರಾಗಿ, ಮತಗಟ್ಟೆಗೆ ಬಂದು ಅಲ್ಲಿಯೇ ಇಟ್ಟಿರುವ ಸೂಚನಾ ಫಲಕ ನೋಡಿ ಯಾವ ಪಕ್ಷ , ಯಾವ ಅಭ್ಯರ್ಥಿ ,  ಎಂದು ತಿಳಿದು ಮತ  ಹಾಕುವುದು ಸರಿ ಎನಿಸುತ್ತದೆ. ಅಭ್ಯರ್ಥಿಗಳು ಬೇಕಾದರೆ ತಮ್ಮ ಜೊತೆಗೆ ಐದು ಜನ ಬೆಂಬಲಿಗರೊಂದಿಗೆ ಅಬ್ಬರವಿಲ್ಲದೇ ಮನೆ ಮನೆಗೆ ತೆರಳಿ ಮತದಾರರನ್ನು ಮತ ಯಾಚಿಸ ಬಹುದಲ್ಲವೇ.. ಹಾಗೇಯೇ ಮತದಾರರು, ಮತದಾನದ ತಮ್ಮ ಪ್ರಮುಖ ಹಕ್ಕನ್ನು ತಮ್ಮ ಪ್ರಮುಖ ಕರ್ತವ್ಯವೆಂದು ತಿಳಿದು ಸ್ವಯಂ ಪ್ರೇರಿತರಾಗಿ ಮತಗಟ್ಟೆಗೆ ಬಂದು, ಮತದಾನ ಮಾಡಿದರೆ  ಸಾಮಾನ್ಯ ಖರ್ಚಿನಲ್ಲಿ ಶೇಕಡ ನೂರಕ್ಕೆ,  ನೂರು ಪರ್ಸೆಂಟ್ ಮತದಾನವಾಗುವುದಿಲ್ಲವೇ… ಸ್ವಯಂಪ್ರೇರಿತರಾಗಿ ಮತದಾನ ಮಾಡದವರಿಗೆ ಒಂದು ದಂಡ ಅಂತ ವಿಧಿಸ ಬಹುದಲ್ಲವೇ.. ಅನಿವಾರ್ಯವಾಗಿ, ಮತಗಟ್ಟೆಗೆ ಬರಲು ಆಗದ ವರಿಗೆ , ಅಶಕ್ತರಿಗೆ, ಅಂಗವಿಕಲರಿಗೆ , ವೃದ್ದರಿಗೆ  , ಈ ಬಾರಿ ಚುನಾವಣೆ ಸಿಬ್ಬಂದಿ ಮನೆಗೇ ಬಂದು ಮತ ದಾನ ಮಾಡಿಸಿದರಲ್ಲ ಹಾಗೇ ಮಾಡ ಬಹುದಲ್ಲವೇ..

ಈ ದುಂದು ವೆಚ್ಚದ  ಹಣವನ್ನು ದೇಶದ ಒಳಿತಿಗಾಗಿ ಬಳಸಬಹುದಲ್ಲವೇ… ಎಂಬುದು ನನ್ನ ವೈಯಕ್ತಿಕ ಅನಿಸಿಕೆ, ಮತ್ತು  ಅಭಿಪ್ರಾಯ, ಯಾವುದೇ ತಪ್ಪು…ಒಪ್ಪು ಇದ್ದರೆ ಮನ್ನಿಸಿ..

– ಪೂರ್ಣಿಮಾ ಎಲ್.ಬಸವರಾಜ್

ಗೃಹಿಣಿ , ದಾವಣಗೆರೆ.

error: Content is protected !!