ಮಾನ್ಯರೇ,
ಎಲ್ಲರೂ ಗಮನಿಸಿರುವ ಹಾಗೆ ಕೆಲವರು ಆಹ್ವಾನ ಪತ್ರಿಕೆಗಳನ್ನು ತುಂಬಾ ವೈಭವಯುತವಾಗಿ ಮಾಡಿಸಿರುತ್ತಾರೆ. ಈ ರೀತಿ ತಮ್ಮ ಸಂಪತ್ತಿನ ಪ್ರದರ್ಶನ ಮಾಡುವ ಅವಶ್ಯಕತೆ ಇದೆಯೇ? ಎಂದು ನಾವೆಲ್ಲರೂ ಚಿಂತನೆ ಮಾಡಬೇಕಿದೆ. ಅವರ ದೊಡ್ಡಸ್ಥಿಕೆಗೆ ಪರಿಸರ ಹಾಳು ಮಾಡುವುದು ಎಷ್ಟು ಸರಿ? ಈ ಕಾಗದದ ತಯಾರಿಕೆಗೆ ಮರಗಳನ್ನು ಕಡಿಯುವುದರಿಂದ ಪ್ರಕೃತಿಯನ್ನು ನಾವಾಗೇ ಹಾಳುಮಾಡಿದ ಹಾಗೆ ಆಗುವುದಿಲ್ಲವೇ? ಹೋಗಲಿ ಒಂದು ಮದುವೆ, ಕಾರ್ಯಕ್ರಮ ಆದಾಗ ನೆನಪಿಗೆ ಒಂದು ಸಸಿಯನ್ನಾದರೂ ನೆಡುವ ಪರಿಪಾಠ ಬೆಳೆಸಿಕೊಳ್ಳುತ್ತಾರೆಯೋ? ಅದೂ ಇಲ್ಲ.
ಹೀಗಿದ್ದಾಗ ನಮಗೆ ಪರಿಸರವನ್ನು ಹಾಳು ಮಾಡುವ ಯಾವ ಅಧಿಕಾರವೂ ಇರುವುದಿಲ್ಲ. ನಾವು ಓದುತ್ತಿರುವಾಗ ಆಹ್ವಾನ ಪತ್ರಿಕೆಯ ಖಾಲಿ ಜಾಗದಲ್ಲಿ ಮಗ್ಗಿ, ಭೂಪಟ, ಪದ್ಯಗಳನ್ನು ಬರೆದು ಅಭ್ಯಾಸ ಮಾಡುತ್ತಿದ್ದೆವು. ಹಾಗಾಗಿ ಸ್ವಲ್ಪವಾದರೂ ಮರುಬಳಕೆಯಾಗಿ ಕಾಗದದ ಉಳಿತಾಯವಾಗುತ್ತಿತ್ತು. ಈಗಂತೂ ಯಾರೂ ಹೀಗೆ ಮಾಡುವುದಿಲ್ಲ. ಈ ರೀತಿ ಮರುಬಳಕೆ ಮಾಡುವುದನ್ನು ಕೀಳಾಗಿ ನೋಡುತ್ತಾರೆ. ಸುಮ್ಮನೆ ಕಸಕ್ಕೆ ಎಸೆದು ಬಿಡುತ್ತಾರೆ. ದಿನಾಂಕ ಮುಗಿದ ತಕ್ಷಣ ಬಿಸಾಕುವ ಆಹ್ವಾನ ಪತ್ರಿಕೆಗಳಿಗೆ ಅಷ್ಟೊಂದು ಇನ್ವೆಸ್ಟ್ ಮಾಡುವ ಅವಶ್ಯಕತೆ ಇದೆಯಾ?
ಹಾಗೂ ಮೊದಲು ಬೇರೆ ಊರುಗಳಿಗೆ ಪೋಸ್ಟ್ ಮಾಡುತ್ತಿದ್ದುದರಿಂದ ಪತ್ರಿಕೆ ಮೇಲೆ ಇನ್ನೊಂದು ಕವರ್ ಇರಬೇಕಾಗಿತ್ತು. ಈಗ ಪೋಸ್ಟ್ ಮಾಡುವುದು ಕಡಿಮೆ. ಎಲ್ಲಾ ವಾಟ್ಸಾಪ್ ಮೂಲಕ ಕಳಿಸುತ್ತಾರೆ. ಆದ್ದರಿಂದ ಕೈಯಲ್ಲಿ ಕೊಡುವ ಪತ್ರಿಕೆಗಳಿಗೆ ಕವರ್ ಬೇಕಾಗುವುದಿಲ್ಲ. ಅವಷ್ಟನ್ನಾದರೂ ಉಳಿಸಬಹುದು.
ಅಲ್ಲದೆ ಒಳಗಿನ ಪುಟಗಳು ನಾಲ್ಕು ಇರುತ್ತವೆ. ಮೇಲಿನ ಪುಟದಲ್ಲಿ ದೇವರ ಚಿತ್ರ ಮತ್ತೆ ಒಳಗೆ ಹಿಂದೆ ಖಾಲಿ ಇರುತ್ತದೆ. ಅದರ ಬದಲಿಗೆ ವಿಷಯ ಇರುವ ಪುಟದ ಹೊರಬದಿಯಲ್ಲಿ ದೇವರ ಚಿತ್ರ ಹಾಕಿದರೆ ಹೊರಗಿನ ಪುಟವನ್ನು ಸಹ ಉಳಿಸಬಹುದು. ಒಂದೊಂದು ಮದುವೆಯಿಂದ ಹೀಗೆ ಸಾವಿರಾರು ಪುಟಗಳನ್ನು, ಕವರ್ ಗಳನ್ನು ಉಳಿಸಿದರೆ ನಾವು ಎಷ್ಟೊಂದು ಗಿಡ ಮರಗಳನ್ನು ಉಳಿಸಿದ ಹಾಗೆ ಆಗುವುದಿಲ್ಲವೇ?
ಪರಿಸರ ಕಾಳಜಿಯಿಂದ ಆಹ್ವಾನ ಪತ್ರಿಕೆಗಳ ಬಗ್ಗೆ ಒಂದು ಬದಲಾವಣೆಯನ್ನು ಮಾಡಿದರೆ ನಾವು ಪ್ರಕೃತಿಗೆ ನಿಜವಾದ ಸೇವೆ ಸಲ್ಲಿಸಿದ ಹಾಗೆ ಆಗುತ್ತದೆ.
ಮಮತಾ ನಾಗರಾಜ್
ದಾವಣಗೆರೆ. 9964829122