ಮಾನ್ಯರೇ,
ಕರ್ನಾಟಕ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಪಕ್ಷದ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ಜನರಲ್ಲಿ ಮತ ಯಾಚಿಸುತ್ತಿದ್ದಾರೆ. ಈ ಹಿಂದೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆದ್ದು ಶಾಸಕ, ಸಚಿವರಾದರೂ ಕೂಡ ಅಲ್ಲಿನ ಕ್ಷೇತ್ರಗಳ ಸ್ಥಿತಿಗತಿಗಳಂತೂ ತುಂಬಾ ಶೋಚನೀಯವಾಗಿದೆ. ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ನಂತಹ ಅನೇಕ ಜ್ವಲಂತ ಸಮಸ್ಯೆಗಳಿಂದ ಈಗಲೂ ಬಳಲುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರತಿ ಬಾರಿಯೂ ಆಶ್ವಾಸನೆ ನೀಡಿ ಹೋಗುವುದೇ ಆಗಿದೆ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ನಿಂತಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ತುರ್ತು ಮತ್ತು ಆಗಬಹುದಾದಂತಹ ಅಭಿವೃದ್ಧಿ ಕೆಲಸ, ಕಾರ್ಯಗಳನ್ನು ಪಟ್ಟಿ ಮಾಡಿ, ಮುಂದಿನ ಐದು ವರ್ಷದೊಳಗೆ ಅವುಗಳನ್ನು ಶೇಕಡಾ ನೂರಕ್ಕೆ ನೂರು ಈಡೇರಿಸುವಂತ ಭರವಸೆ ನೀಡುವ ಮೂಲಕ ಮತ ಯಾಚಿಸಲಿ, ಆದಾಗ್ಯೂ ಈಡೇರಿಸದಿದ್ದರೆ ಮುಂದಿನ ಬಾರಿ ಮತವೇ ಹಾಕಬೇಡಿ ಎನ್ನುವ ವಾಗ್ದಾನ ನೀಡಲಿ. ಆಗ ಮಾತ್ರ ಮತದಾರರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯ. ಇದರಿಂದ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಸಮಸ್ಯೆಗಳಿಗೆ ಮುಕ್ತಿ ನೀಡಿದಂತಾಗಿ ಶಾಶ್ವತ ಪರಿಹಾರ ದೊರಕುತ್ತದೆ.
– ಮುರುಗೇಶ ಡಿ., ಹವ್ಯಾಸಿ ಬರಹಗಾರರು, ದಾವಣಗೆರೆ.