ಮಾನ್ಯರೇ,
ಚುನಾವಣಾ ದಿನಗಳಲ್ಲಿ ಕೆಲ ರಾಜಕಾರಣಿಗಳು ಸರಳತೆ ಪ್ರದರ್ಶಿಸುವಲ್ಲಿ ತೊಡಗಿದ್ದಾರೆ. ಬರಿಗಾಲಲ್ಲಿ ನಡೆಯುವುದೋ, ಇಲ್ಲವೇ ದರ್ಶಿನಿ ಹೋಟೆಲ್‌ಗಳಲ್ಲಿ ತಿಂಡಿ – ಊಟ ಮಾಡುವ ಮೂಲಕ ಜನಸಾಮಾನ್ಯರಂತೆ ನಾವಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇನ್ನೊಬ್ಬರು ಸಾರ್ವಜನಿಕರಿಗೆ ದೋಸೆ ಮಾಡುವ ಮೂಲಕ ನಮಗೂ ಅಡುಗೆ ಮಾಡಲು ಬರುತ್ತದೆ ಎಂಬುದನ್ನು ತೋರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಆದರೆ, ಇದೇ ರಾಜಕಾರಣಿಗಳು ಚುನಾವಣೆಯಲ್ಲಿ ಸಲ್ಲಿಸಿರುವ ನಾಮಪತ್ರ ನೋಡಿದರೆ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಚುನಾವಣಾ ನಾಮಪತ್ರಗಳಲ್ಲಿ ಅಭ್ಯರ್ಥಿಗಳು ಘೋಷಿಸುವ ಆಸ್ತಿಯ ಪ್ರಮಾಣ ನಿರಂತರ ಏರಿಕೆಯಾಗುತ್ತಿದೆ.
ಬಹುತೇಕ ರಾಜಕಾರಣಿಗಳು ಬಳಸುವ ವಸ್ತುಗಳು ದುಬಾರಿ. ಜೀವನ ಶೈಲಿಯೂ ಐಷಾರಾಮಿ. ಹೀಗಿರುವಾಗ ಚುನಾವಣಾ ವೇಳೆ ಸರಳತೆ ಪ್ರದರ್ಶಿಸುವುದರಲ್ಲಿ ಏನಾದರೂ ಅರ್ಥವಿದೆಯೇ? ಜನ ಇದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರು ಎಂದು ಭಾವಿಸಿದ್ದಾರೆಯೇ?
ಕೋಟಿಗಟ್ಟಲೆ ಆಸ್ತಿ ಇರುವಾಗ ಅದಕ್ಕೆ ತಕ್ಕ ಹಾಗೆ ಬದುಕಿದರೆ ತಪ್ಪೇನೂ ಇಲ್ಲ. ಹಾಗೆ ಬದುಕಿಯೇ ಜನ ಸೇವೆ ಮಾಡಬಹುದು, ಜನಪರ ಆಗಿರಬಹುದು ಎಂದು ತೋರಿಸಿಕೊಟ್ಟವರೂ ಇದ್ದಾರೆ.
ಹುಸಿ ಸರಳತೆಯನ್ನು ಚುನಾವಣಾ ವೇಳೆಯಷ್ಟೇ ತೋರಿದರೆ ಪ್ರಯೋ ಜನವಿಲ್ಲ. ಸರಳತೆ ಎಂಬುದು ನಿರಂತರವಾಗಿರಲಿ. ಮಹಾತ್ಮ ಗಾಂಧಿ ಅಂಥವರು ಚುನಾವಣೆಗಾಗಿ ಸರಳರಾಗಲಿಲ್ಲ. ಜೀವನವಿಡೀ ಸರಳವಾಗಿ ದ್ದರು. ಅಂತಹ ಗುಣ ಅಂತರಂಗದಲ್ಲಿ ಇದ್ದಲ್ಲಿ ಮಾತ್ರ ಬಹಿರಂಗ ಸರಳತೆ ತೋರಿಸಿ. ಇಲ್ಲವಾದರೆ ಸರಳತೆಯ ವರ್ತನೆಗಳೂ ಚುನಾವಣಾ ಭರವಸೆ ಯಂತೆ ಹುಸಿ ಎಂದು ಪ್ರಜ್ಞಾವಂತ ಮತದಾರ ಭಾವಿಸುತ್ತಾನೆ ಅಷ್ಟೇ.
– ಮುರಳಿ ಮೋಹನ್