ಮಾನ್ಯರೇ,
ಸಮಾಜ ಸೇವೆ, ಬಡವರ ಕಲ್ಯಾಣ, ದೀನ ದಲಿತರ ಉದ್ಧಾರ ಎಂಬ ಅನೇಕ ಪರಿಕಲ್ಪನೆಗಳನ್ನು ಇಟ್ಟುಕೊಂಡು ರಾಜಕೀಯ ಕ್ಷೇತ್ರಕ್ಕೆ ಬಂದ ನಮ್ಮ ರಾಜಕಾರಣಿಗಳ ಇತ್ತೀಚಿನ ವರ್ತನೆಗಳನ್ನು ನೋಡಿದರೆ ಇವರು ಕೇವಲ ಅಧಿಕಾರದ ಆಸೆಗೆ ಬಂದಿದ್ದಾರೆಯೇ ವಿನಃ ಜನಸೇವೆಗಲ್ಲ ಎಂಬುದಂತು ಸಾಬೀತಾಗುತ್ತಿದೆ. ಚುನಾವಣೆಯಲ್ಲಿ ಕೇವಲ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ, ಇಷ್ಟು ವರ್ಷ ಸಾಕಿ ಬೆಳೆಸಿ, ಪಕ್ಷ ಕೊಟ್ಟಿರುವ ಎಲ್ಲಾ ಜವಾಬ್ದಾರಿ, ಪದವಿಗಳನ್ನು ಅನುಭವಿಸಿ ತನ್ನ ರಾಜಕೀಯ ಜೀವನಕ್ಕೆ ಭದ್ರಬುನಾದಿ ಹಾಕಿಕೊಟ್ಟ ಪಕ್ಷವನ್ನೇ ತ್ಯಜಿಸಿ ಬೇರೆ ಪಕ್ಷಕ್ಕೆ ಹೋಗಿ ತನ್ನ ಮಾತೃ ಪಕ್ಷದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು, ನಾಯಕರುಗಳನ್ನು ಬೈಯ್ಯುವುದು ಸಾಮಾನ್ಯವಾಗಿಬಿಟ್ಟಿದೆ.
ಇಂತಹ ಉದಾಹರಣೆಗಳನ್ನು ದಿನ ಬೆಳಗಾದರೂ ನೋಡುತ್ತಿದ್ದೇವೆ. ಇವರನ್ನು ಬೆಳೆಸಿದ ಪಕ್ಷದ ಮೇಲೆಯೇ ನಂಬಿಕೆ ಇಲ್ಲ ಅಂದ ಮೇಲೆ ಕ್ಷೇತ್ರದ ಜನರನ್ನು ಹೇಗೆ ನಂಬುತ್ತಾರೆ? ಇವರಿಗೆ ಬೇಕಾಗಿರುವುದು ಜನಸೇವೆಯಲ್ಲ, ಕೇವಲ ಅಧಿಕಾರ, ಪದವಿ ಮಾತ್ರ. ಆದರೆ ಅಧಿಕಾರದ ಮದ ಏರಿರುವ ಇಂತಹ ರಾಜಕಾರಣಿಗಳಿಂದ ಜನಸಾಮಾನ್ಯರಾದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಜನಸೇವೆ ಮಾಡಬೇಕೆನ್ನುವವರು, ರಾಜಕಾರಣಿಯಾಗಿದ್ದುಕೊಂಡೇ ಮಾಡಬೇಕೆಂದಿಲ್ಲ, ಸಾಮಾನ್ಯ ವ್ಯಕ್ತಿಯಾಗಿಯೂ ಮಾಡಬಹುದು ಎಂಬುದಕ್ಕೆ ರಾಜ್ಯದಲ್ಲಿ ಕಣ್ಣ ಮುಂದೆಯೇ ಹಲವು ಉದಾಹರಣೆಗಳು ಸಾಕಷ್ಟಿವೆ.
– ಡಿ. ಮುರುಗೇಶ , ದಾವಣಗೆರೆ.