ಮಾನ್ಯರೇ,
ದಾವಣಗೆರೆ ರೈಲ್ವೆ ನಿಲ್ದಾಣವೇನೋ ಅಪಾರ ವೆಚ್ಚ ಮಾಡಿ ಆಧುನಿಕರಣವಂತೂ ಆಯಿತು. ಹಲವು ವರ್ಷಗಳ ಸಾರ್ವಜನಿಕ ಒತ್ತಡಗಳ ಕಾರಣ ಒಂದೇ ಇದ್ದ ಪ್ಲಾಟ್ ಫಾರಂಗಳು ಎರಡಾದವು. ಇದರಿಂದಾಗಿ ಅರಸೀಕೆರೆ -ಬೆಂಗಳೂರು ಮಾರ್ಗದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಸಂಭ್ರಮ ಪಟ್ಟಿದ್ದೂ ಉಂಟು. ಆದರೆ ಆ ಸಂಭ್ರಮ ಜಾಸ್ತಿ ದಿನ ಉಳಿಯಲಿಲ್ಲ.
ಅವರ ಪಾಲಿಗೆ ಅವರ ಕಛೇರಿ ಕೊಠಡಿಗಳ ಬಳಿ ಇರುವ ಒಂದನೇ ಪ್ಲಾಟ್ ಫಾರಂ ಮಾತ್ರ ರೈಲ್ವೆ ನಿಲ್ದಾಣಕ್ಕೆ ಸಂಬಂಧಪಟ್ಟದ್ದು ಅನ್ನುವ ಧೋರಣೆ ಎದ್ದು ಕಾಣುತ್ತಿದೆ. ನಿಲ್ದಾಣದ ದಕ್ಷಿಣ ಭಾಗದಿಂದ ಎರಡನೇ ಫ್ಲ್ಯಾಟ್ ಫಾರಂಗೆ ಬರುವ ಪ್ರಯಾಣಿಕರು ಮತ್ತೆ ಟಿಕೆಟ್ ಪಡೆಯಲು ಪರದಾಡುತ್ತಾ ಒಂದನೇ ಪ್ಲಾಟ್ ಫಾರಂಗೆ ಧಾವಿಸಬೇಕು. ಆ ಸಮಯ ಮಹಿಳಾ ಮತ್ತು ವೃದ್ಧ ಪ್ರಯಾಣಿಕರ ಸ್ಥಿತಿ ಅನುಭವಿಸಿಯೇ ತೀರಬೇಕು. ಇನ್ನು ಎರಡನೇ ಪ್ಲಾಟ್ ಫಾರಂನ ಶೌಚಾಲಯ ಶುಚಿಯಿಲ್ಲದೆ ಗಬ್ಬು ವಾಸನೆ ಬೀರುತ್ತದೆ. ಫ್ಯಾನ್‌ಗಳು ಇದ್ದರೂ ಅವನ್ನು ಚಲಾಯಿಸದೇ ಮಹಿಳೆಯರು, ಮಕ್ಕಳು, ವೃದ್ಧ ಪ್ರಯಾಣಿಕರು ಸುಡು ಬೇಸಿಗೆಯ ಸೆಖೆ ತಾಳಲಾರದೆ, ಅವರ ಒದ್ದಾಟ ನೋಡಲಾಗದು. ಪ್ರಯಾಣಿಕರಿಗೆ ಈ ಕನಿಷ್ಠ ಸೇವೆ ಸಮರ್ಪಕವಾಗಿ ಸಿಗುವಂತಾಗಲಿ.
– ಇಮ್ತಿಯಾಜ್ ಹುಸೇನ್, ದಾವಣಗೆರೆ.