ಅಲ್ಲಮಪ್ರಭುಗಳ ಜಯಂತಿ ಕಾರ್ಯಕ್ರಮದಲ್ಲಿ ನಿಜಗುಣಾನಂದ ಪ್ರಭು ಶ್ರೀಗಳು
ರಾಣೇಬೆನ್ನೂರು, ಮಾ. 26- ನೃತ್ಯಗಾರರಿಗೆ ವಾದ್ಯ ನುಡಿಸುವ ಅತ್ಯಂತ ಕೆಳ ಸಮಾಜದಲ್ಲಿ ಹುಟ್ಟಿ ಮೇರು ಪರ್ವತವಾದವರು ಅಲ್ಲಮಪ್ರಭುಗಳು ಎಂದು ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ತಮ್ಮ ವಾಸ್ತವ್ಯದ ನಿವಾಸದಲ್ಲಿ ಮೊನ್ನೆ ನಡೆದ ಅಲ್ಲಮ ಪ್ರಭುಗಳ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಉಪದೇಶ ನೀಡಿದರು.
ಕೂದಲು ನೆರೆಯಾಗಲಿ, ಹಲ್ಲು ಉದುರಲಿ, ನಡು ಬಾಗಲಿ, ಕಾಲ ಮೇಲೆ ಕೈಯೂರಿ ಮೇಲೆಳುವಂತಾಗಲಿ ದೇಹಕ್ಕೆ ಮುಪ್ಪಡರಲಿ ಆದರೆ, ಒಣಗುವ ಮರಕ್ಕೆ ನೀರೆರೆದು ಹಸಿರಾಗಿಸುವಂತೆ ಅನುಭಾವಿಗಳ ಸಂಪರ್ಕದಿಂದ ನೀರನೆರಿಸಿಕೊಂಡು ಆತ್ಮಕ್ಕೆ ಅಂದರೆ ಮನಸ್ಸಿಗೆ ಮುಪ್ಪು ಬಾರದಂತೆ ನೋಡಿಕೊಂಡು ಬದುಕನ್ನು ಸದಾ ಹಸಿರಾಗಿಸಿಕೊಳ್ಳಿ ಎಂದು ನಿಜಗುಣಾನಂದ ಶ್ರೀಗಳು ಉಪದೇಶಿಸಿದರು.
ಬನವಾಸಿಯಲ್ಲಿ ಜನಿಸಿ ಕಾಶ್ಮೀರದ ವರೆಗೆ ಸಂಚರಿಸಿದ ಸಾಧನೆಯ ಶಿಖರವೇ ಆಗಿದ್ದ ಅಲ್ಲಮಪ್ರಭುಗಳು, ಮೇರು ಸಾಧನೆ ಗೈದು ವಜ್ರದೇಹಿಗಳಾಗಿದ್ದಂತಹ ಮಹಾನ್ ಶರಣರ ಮನವೊಲಿಸಿ, ಅವರನ್ನು ಬಸವಣ್ಣನೆಡೆಗೆ ಕರೆತಂದವರು ಎಂದು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಾಸನದ ಮುಕುಂದೇಶ್ವರ ಮಠದ ಡಾ. ಮಹಾಂತಸ್ವಾಮಿಗಳು ನುಡಿದರು.
ಹನ್ನೆರಡನೆ ಶತಮಾನದಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತಹ ಮನ್ನಣೆ ಪಡೆಯುತ್ತಿದ್ದ ಅಲ್ಲಮಪ್ರಭುಗಳ ಮಾತುಗಳಂತೆಯೇ ಇಂದು ನಿಜಗುಣಾನಂದ ಪ್ರಭುಗಳ ಮಾತುಗಳು ಮನ್ನಣೆ ಪಡೆಯುವಂತಿವೆ. ವೈದಿಕರ ನಾಡಿನಲ್ಲಿ ವೈಚಾರಿಕತೆ ಬೀಜ ಬಿತ್ತಿ ಉತ್ತಮ ಬೆಳೆ ತೆಗೆಯುವ ಅವರ ಪರಿಶ್ರಮ ಅಪಾರವಾದುದು ಎಂದು ಡಾ. ಮಹಾಂತ ಶ್ರೀಗಳು ನುಡಿದರು.
ರತ್ನಾಕರ ಕುಂದಾಪೂರ, ಎಂ.ಜಿ. ಪಾಟೀಲ, ಕರಬಸಪ್ಪ ಮಾಕನೂರ, ವಾಸು ಲದ್ವಾ ಮತ್ತಿತರರು ಉಪಸ್ಥಿತರಿದ್ದರು. ಕಮಿಟಿ ಅಧ್ಯಕ್ಷ ವಾಸು ಗುಪ್ತಾ ಸ್ವಾಗತಿಸಿದರು.