ರಾಣೇಬೆನ್ನೂರು, ಫೆ.12- ವಿಜ್ಞಾನದ ಸಂಗತಿ ಯನ್ನು ವಿದ್ಯಾರ್ಥಿಗಳು ಅರಿತುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಇಸ್ರೋ ಸಂಸ್ಥೆಯ ವಿಜ್ಞಾನಿ ಎಚ್.ಎಲ್. ಶ್ರೀನಿವಾಸ ಹೇಳಿದರು.
ನಗರದ ಡೆಲ್ಲಿ ಸೆಂಟ್ರಲ್ ಸ್ಕೂಲ್‌ನಲ್ಲಿ ಬೆಂಗಳೂರಿನ ಇಸ್ರೋ ಸಂಸ್ಥೆಯ ವತಿಯಿಂದ ಸ್ಪೇಸ್ ಆನ್ ವ್ಹೀಲ್ಸ್ (ಗಾಲಿಯ ಮೇಲೆ ಅಂತರಿಕ್ಷ) ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 1963ರಲ್ಲಿ ಆರಂಭವಾದ ಇಸ್ರೋ ಸಂಸ್ಥೆ ಇಲ್ಲಿವರೆಗೂ ಅನೇಕ ಸಾಧನೆಗಳನ್ನು ಮಾಡಿದೆ ಹಾಗೂ ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಇದರ ಪ್ರಯೋ ಜನ ಪಡೆಯಬೇಕು ಎಂದರು.
ಆರ್‍ಟಿಇಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ.ಟಿ.ಉದಪುಡಿ ಮಾತನಾಡಿ, ಇಸ್ರೋ ಸಂಸ್ಥೆಯಿಂದ ದೇಶದಲ್ಲಿ ಅನೇಕ ಸಾಧನೆಗಳನ್ನು ಮಾಡಲಾಗಿದೆ. ಮೊದಲ ಬಾರಿಗೆ ಉಡಾವಣೆಯಾದ ಆರ್ಯಭಟ ಉಪಗ್ರಹದಿಂದ ಇಲ್ಲಿವರೆಗೂ ಅನೇಕ ಉಪಗ್ರಹ ಉಡಾವಣೆ ಯಾಗಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳಲು ಇದೊಂದು ಅವಕಾಶವಿದೆ ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ತೊಗಟ ವೀರ, ಮಂಜುನಾಥ ತೊಗಟವೀರ, ಡಾ.ರಾಜು ಶಿರೂರ, ಶಾಲೆಯ ಪ್ರಾಚಾರ್ಯೆ ಆನಂದಿ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.